ಚುನಾವಣೆ ವೇಳೆ ತೆರೆಗೆ ಬರುತ್ತಾ ಕುರುಕ್ಷೇತ್ರ? ನಿಮ್ಮ ಕುತೂಹಲಕ್ಕೆ ಸಧ್ಯದಲ್ಲೇ ಸಿಗಲಿದೆ ಉತ್ತರ!

ಕುರುಕ್ಷೇತ್ರ ಚಿತ್ರತಂಡ ಹೇಳಿದ್ದಂತೆಯೇ ಎಲ್ಲವೂ ಆಗಿದ್ರೆ , ಸಿನಿಮಾ ಇಷ್ಟು ಹೊತ್ತಿಗೆ ಥಿಯೇಟರ್‍ನಲ್ಲಿರಬೇಕಿತ್ತು. ಈ ಹಿಂದೆ ಸಿನಿಮಾ ಟೀಮ್,​ ಮಾರ್ಚ್‌ 2ರ ವೇಳೆಗೆ ಸೆನ್ಸಾರ್‌ ಮಾಡಿಸಿ, ಮಾರ್ಚ್‌ 9ರ ವೇಳೆಗೆ ಸಿನಿಮಾ ಬಿಡುಗಡೆ ಮಾಡ್ತೀವಿ ಅಂತ ಹೇಳ್ಕೊಂಡಿತ್ತು. ಆದರೆ, ಗ್ರಾಫಿಕ್ಸ್​ ಅದೂ ಇದು ಅಂತ ರಿಲೀಸ್​​ ಡಿಲೇ ಆಗಿದೆ.

ಈಗ ಕುರುಕ್ಷೇತ್ರದ ಸಿನಿಮಾದ ಕೊನೆಯ ಹಂತದ ಕೆಲಸ ನಡೆಯುತ್ತಿದೆ. ಒಂದೆಡೆ ಎರಡನೇ ಹಂತದ ಡಬ್ಬಿಂಗ್ ಕೆಲಸ ಕಾರ್ಯ ನಡೆಯುತ್ತಿದ್ರೆ ಮತ್ತೊಂದೆಡೆ ಪೈನಲ್​​ ಗ್ರಾಫಿಕ್ಸ್​ ವರ್ಕ್​ ಆಗಿದೆ. ಸಖತ್​ ಫಾಸ್ಟಾಗಿ ಈ ಎಲ್ಲಾ ಕೆಲಸ ನಡೆಯುತ್ತಿದೆ. ನಿರ್ಮಾಪಕ ಮುನಿರತ್ನ ಹೇಳಿದ ಪ್ರಕಾರ ಏಪ್ರಿಲ್​ 20ಕ್ಕೆ ಫಸ್ಟ್​ ಕಾಪಿ ಸಿಗಲಿದೆ. ಮುನಿರತ್ನ ಕುರುಕ್ಷೇತ್ರ ಸಿನಿಮಾ ಸ್ಯಾಂಡಲ್​​​​ವುಡ್​​​ನ ಮಹಾ ಸಾಹಸ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಈ ಅದ್ದೂರಿ ಸಿನಿಮಾವನ್ನ ತೆರೆ ಮೇಲೆ ನೋಡಲು ಡಿ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಇದೀಗ ಸಿನಿಮಾ ನಿರ್ಮಾಪಕ ಮುನಿರತ್ನ ಸಿನಿಮಾವನ್ನು ಮೇ ಫಸ್ಟ್​​ ವೀಕ್​​ ಅಥವಾ ಸೆಕೆಂಡ್​​ ವೀಕ್​​​ ರಿಲೀಸ್ ಮಾಡೋದಾಗಿ ಹೇಳಿದ್ದಾರೆ. ಆದರೆ ಇದು ಸಾಧ್ಯವಾಗುತ್ತಾ ಅನ್ನೋದು ಪಶ್ನೆ.

ಯಾಕಂದ್ರೆ ಈಗ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಸಿನಿಮಾದ ನಿರ್ಮಾಪಕ ಮುನಿರತ್ನ ಆರ್​ ಆರ್​ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಜೊತೆಗೆ ಸಿನಿಮಾದ ಟೈಟಲ್​​ನಲ್ಲೂ ಮುನಿರತ್ನ ಇದೆ. ಇನ್ನು ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿರೋ ಅಂಬರೀಶ್ ಮಂಡ್ಯದಿಂದ​, ಸಾಯಿಕುಮಾರ್ ಬಾಗೆಪಲ್ಲಿ ಕ್ಷೇತ್ರದ ಟಿಕೇಟ್​ ಆಕಾಂಕ್ಷಿಗಳು. ಇವರೆಲ್ಲರಿಗೂ ಟಿಕೇಟ್​ ಸಿಗೋ ಛಾನ್ಸ್​ ಇದೆ. ಹೀಗಾಗಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವಾಗ ಸ್ಪರ್ಧಿಗಳು ನಟಿಸಿರುವ ಸಿನಿಮಾವನ್ನು ರಿಲೀಸ್​ ಮಾಡಬಹುದಾ ಅನ್ನೋದು ಈಗ ಹುಟ್ಕೊಂಡಿರೋ ಪ್ರಶ್ನೆ. ಇದು ಮುನಿರತ್ನ ಅವರಿಗೂ ಗೊತ್ತಿಲ್ಲದೆ ಇರೋ ವಿಚಾರ ಅಲ್ಲ. ಹೀಗಾಗಿ ನಿರ್ಮಾಪಕರು ಚುನಾವಣ ಅಧಿಕಾರಿಗಳನ್ನು​ ಭೇಟಿಯಾಗಿ ಚರ್ಚಿಸಲು ನಿರ್ಧರಿಸಿದ್ದಾರೆ. ಒಂದುವೇಳೆ ಚುನಾವಣ ಆಯೋಗ ಅವಕಾಶ ನೀಡದಿದಲ್ಲಿ ಕುರುಕ್ಷೇತ್ರ ಸಿನಿಮಾದ ರಿಲೀಸ್​ ಡೇಟ್​​ ಪೋಸ್ಟ ಪೋನ್​ ಆಗಲಿದೆ. ಅಂದ್ರೆ ಮೇ ಎಂಡ್​ಗೆ ದರ್ಶನ್​ ಅಭಿನಯದ ಕುರುಕ್ಷೇತ್ರ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

ಕಳೆದ ವರ್ಷ ಮುನಿರತ್ನ ಕುರುಕ್ಷೇತ್ರ ಪ್ರಾಜೆಕ್ಟ್​ ಎನೌನ್ಸ್​ ಆದಾಗ ಈ ಸಿನಿಮಾ ನಿರ್ಮಾಣದ ಹಿಂದೆ ರಾಜಕೀಯ ಉದ್ದೇಶ ಇದೆ. ಈ ಚಿತ್ರದ ಮೂಲಕ ನಿರ್ಮಾಪಕ ಮುನಿರತ್ನ ಮತ್ತಷ್ಟು ಪಬ್ಲಿಸಿಟಿ ಗಿಟ್ಟಿಸಿಕೊಳ್ಳುವುದಲ್ಲದೆ, ದರ್ಶನ್​​ ಮತ್ತು ಸಿನಿ ಅಭಿಮಾನಿಗಳ ಮತಗಳನ್ನು ಟಾರ್ಗೆಟ್​ ಮಾಡ್ತಿದ್ದಾರೆ ಅನ್ನುವ ಮಾತು ಕೇಳಿ ಬಂದಿತ್ತು. ಇದೀಗ ನೀತಿ ಸಂಹಿತೆ ಜಾರಿಯಲ್ಲಿರುವ ಹೊತ್ತಿನಲ್ಲೇ ಸಿನಿಮಾದ ರಿಲೀಸ್​ಗೆ ತೆರೆಮರೆಯ ಕಸರತ್ತು ಶುರುವಾಗಿದೆ. ಹೀಗಾಗಿ ಈ ಆರೋಪ ಮತ್ತಷ್ಟು ಹೆಚ್ಚಾಗಿದೆ. ಆದ್ರೆ ಮುನಿರತ್ನ ಮಾತ್ರ ಈ ಚಿತ್ರಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ ಅನ್ನೋದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಕುರುಕ್ಷೇತ್ರ ಸಿನಿಮಾದ ವರ್ಕ್​ ಮುಗಿಯುತ್ತಾ ಬಂದಿದೆ. ಮೇ ತಿಂಗಳ ಆರಂಭದಲ್ಲೇ ಸಿನಿಮಾ ರಿಲೀಸ್ ಮಾಡೋ ಪ್ಲ್ಯಾನ್​ ಚಿತ್ರತಂಡದ್ದು. ಆದ್ರೆ ಇದಕ್ಕೆ ಪರ್ಮಿಶನ್​ ಸಿಗುತ್ತೋ ಇಲ್ವೋ ಅನ್ನೋದು ಸದ್ಯದ ಕುತೂಹಲ. ಬಹುಶ: ಒಂದೆರಡು ದಿನದಲ್ಲಿ ಸ್ಪಷ್ಟ ಉತ್ತರ ಸಿಗಲಿದೆ.