ಗಲ್ಲಿ ರೋಡ್‌ ಕೆಲಸ ಮಾಡಿ ದಿಲ್ಲಿ ರೋಡ್‌ ಬಿಲ್ – ತಪ್ಪು ಮಾಡಿರೋ 145 ಅಧಿಕಾರಿಗಳಿಗೆ ಕಾದಿದೆ ಜೈಲ್

 

ad

ಸಿಲಿಕಾನ್‌ ಸಿಟಿಯಲ್ಲಿ ಸಂಚಲನ ಮೂಡಿಸಿದ್ದ ಬಿಬಿಎಂಪಿ ಕಡತಗಳಿಗೆ ಬೆಂಕಿ ಇಟ್ಟಿದ್ದ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ. ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಅವರ ಹೇಳಿಕೆ ಮೂಲಕವೇ ಏಳು ವರ್ಷಗಳ ಹಿಂದಿನ ‘ಫೈಲ್ ಫೈರ್’ ಪ್ರಕರಣ ಮತ್ತೆ ಚಿಗುರೊಡೆದಿದೆ. ಗಾಂಧಿನಗರ, ಮಲ್ಲೇಶ್ವರಂ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಡಾಂಬರೀಕರಣದ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಲಾಗಿತ್ತು. ಬಿಬಿಎಂಪಿಯ ಭ್ರಷ್ಟ ಅಧಿಕಾರಿಗಳು, ಕಂಟ್ರಾಕ್ಟರ್‌ಗಳು ಸೇರಿ ಬರೋಬ್ಬರಿ 1539 ಕೋಟಿ ರೂಪಾಯಿ ನುಂಗಿ ನೀರು ಕುಡಿದಿದ್ದರು. ಆನಂದ್ ರಾವ್ ಸರ್ಕಲ್‌ನಿಂದ ಶೇಷಾದ್ರಿಪುರಂ ಪೊಲೀಸ್ ಠಾಣೆ ಸರ್ಕಲ್‌ವರೆಗಿನ ಒಂದೇ ರಸ್ತೆಗೆ 12 ಸಲ ಡಾಂಬರೀಕರಣ ಮಾಡಿದ್ದಾಗಿ ಖತರ್ನಾಕ್‌ ಅಸಾಮಿಗಳು ಬಿಲ್‌ ಮಾಡಿಸಿಕೊಂಡಿದ್ದರು. ಗಲ್ಲಿ ರೋಡ್ ಕೆಲಸ ಮಾಡಿ ದಿಲ್ಲಿ ರೋಡ್‌ ಬಿಲ್ ಮಾಡಿದ್ದರು. ಈ ಅಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಅನ್ನೋದು, ಬಿಬಿಎಂಪಿ ಕಡತಗಳಿಗೆ ಬೆಂಕಿ ಇಟ್ಟಿದ್ದು ಯಾರು ಅನ್ನೋದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
2011ರಲ್ಲಿ ಬಿಬಿಎಂಪಿ ಕಡತಗಳಿಗೆ ಬೆಂಕಿ
ಗಾಂಧಿನಗರ, ಮಲ್ಲೇಶ್ವರಂ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಡಾಂಬರೀಕರಣದ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿತ್ತು. ಆಗ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಡಳಿತಾಧಿಕಾರಿಯಾಗಿದ್ದ ಶಿವಕುಮಾರ್ ಸೂಚನೆ ಮೇರೆಗೆ ಅಂದಿನ ಬಿಬಿಎಂಪಿ ಕಮಿಷನರ್ ಸಿದ್ದಯ್ಯ ಬಿಎಂಟಿಎಫ್‌ನಲ್ಲಿ ದೂರು ನೀಡಿದ್ದರು. ಕೇಸ್‌ ದಾಖಲಿಸಿಕೊಂಡಿದ್ದ ಬಿಎಂಟಿಎಫ್ ಪೊಲೀಸರು, ಪ್ರಕರಣ ಸಂಬಂಧ ಕಾರ್ಯಪಾಲಕ ಎಂಜಿನಿಯರ್ ಇದೆಯಾ ವೆಂಡನ್‌ನನ್ನ ಬಂಧಿಸಿ ವಿಚಾರಣೆ ನಡೆಸಿದ್ರು. ಈ ವೇಳೆ ಪ್ರಕರಣದ ಆಳ, ತೀವ್ರತೆ ತಿಳಿದು ಸಿಐಡಿಗೆ ಕೇಸ್‌ ಹಸ್ತಾಂತರಿಸಿದ್ರು.

10 ಸಾವಿರ ಫೈಲ್‌ಗಳು ಬೆಂಕಿಗಾಹುತಿ
ಅಕ್ರಮ ಕಾಮಗಾರಿ ಹಗರಣದ ತನಿಖೆ ಕೈಗೆತ್ತಿಕೊಂಡ ಸಿಐಡಿ ಪೊಲೀಸರು ಅಕ್ರಮದ ಒಂದೊಂದೇ ಪದರವನ್ನ ಬಿಚ್ಚಿದ್ದರು. ನಕಲಿ ಬಿಲ್‌ ಸೃಷ್ಟಿಸಿ ಸುಮಾರು 10109 ಫೈಲ್‌ಗಳ ಮೂಲಕ ಸಾವಿರಾರು ಕೋಟಿಯನ್ನ ಹಣ ಬಿಡುಗಡೆ ಮಾಡಿಕೊಂಡಿದ್ದರು. ಆದ್ರೆ, ಸಿಐಡಿ ವಿಚಾರಣೆ ವೇಳೆ ಕೇವಲ 153 ಫೈಲ್‌ಗಳನ್ನ ಮಾತ್ರ ಹಾಜರುಪಡಿಸಲಾಯಿತು. ಉಳಿದ 9956 ಫೈಲ್‌ಗಳಿಗೆ ಬಿಬಿಎಂಪಿ ಕಚೇರಿಯಲ್ಲೇ ಬೆಂಕಿ ಹಾಕಲಾಗಿದೆ.
ಸಿಐಡಿ ಪೊಲೀಸರಿಂದ 70 ಚಾರ್ಚ್‌ಶೀಟ್
ಬಿಬಿಎಂಪಿ ಹಗರಣದ ಫೈಲ್‌ಗಳಿಗೆ ಬೆಂಕಿ ಬಿದ್ದ ಪ್ರಕರಣದಲ್ಲಿ ಸಿಐಡಿ ಕೋರ್ಟ್‌ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದೆ. ಒಂದು ಕಾಮಗಾರಿ ಒಂದರಂತೆ ಸುಮಾರು 70 ಚಾರ್ಚ್‌ಶೀಟ್‌ ಸಲ್ಲಿಸಲಾಗಿದೆ. ವಿಪರ್ಯಾಸ ಅಂದ್ರೆ, ಚಾರ್ಜ್‌ಶೀಟ್‌ ಸಲ್ಲಿಸಿರೋದು ಕೇವಲ 153 ಫೈಲ್‌ಗಳ ಆಧಾರದ ಮೇಲೆ, ಕೆಲಸ ಆಗಿರುವುದರಲ್ಲಿ ನ್ಯೂನತೆಗಳ ಬಗ್ಗೆ ಮಾತ್ರ. ಉಳಿದ 10 ಸಾವಿರ ಫೈಲ್‌ಗಳು ಎಲ್ಲಿವೆ. ಸುಟ್ಟು ಹೋಗಿರುವ ಫೈಲ್‌ಗಳ ಸಂಬಂಧ ಯಾವುದೇ ಚಾರ್ಚ್‌ಶೀಟ್‌ ಸಲ್ಲಿಕೆಯಾಗಿಲ್ಲ.
145 ಅಧಿಕಾರಿಗಳು, 45 ಗುತ್ತಿಗೆದಾರರು ಜೈಲಿಗೆ
ನಕಲಿ ಕಾಮಗಾರಿಗಳ ಕಡತ ನಾಪತ್ತೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸೂಚನೆ ಮೇರೆಗೆ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ. ಹೀಗಾಗಿ, ಅಕ್ರಮದಲ್ಲಿ ಭಾಗಿಯಾಗಿರುವ 45 ಗುತ್ತಿಗೆದಾರರು, 145 ಅಧಿಕಾರಿಗಳಿಗೆ ಕಂಟಕ ಎದುರಾಗಿದೆ. ಬಿಬಿಎಂಪಿ ಎಂಜಿನಿಯರ್​ಗಳು, ಕಂದಾಯ, ಹಣಕಾಸು ಅಧಿಕಾರಿಗಳೂ ಜೈಲು ಸೇರುವ ಕಾಲ ಹತ್ತಿರವಾಗಿದೆ. ಬೆಂಕಿ ಹಚ್ಚಿದ್ದು ಯಾರು..? ಹಿಂದಿರುವ ಪ್ರಭಾವಿಗಳು ಯಾಱರು ಅನ್ನೋದು ಶೀಘ್ರವೇ ಬಯಲಾಗಲಿದೆ.