ರಸ್ತೆಯಲ್ಲೇ ಪಾರ್ಟಿ ಮಾಡ್ತಿದ್ದವರನ್ನ ಪ್ರಶ್ನಿಸಿದ್ದಕ್ಕೆ ಬಸ್​ ಚಾಲಕನ ಮೇಲೆ ಹಲ್ಲೆ ನಡೆಸಿದ ಪುಂಡರು!

 

ರಸ್ತೆಯಲ್ಲಿ ಕುಡಿಯುತ್ತ ಕುಳಿತಿದ್ದನ್ನು ಪ್ರಶ್ನಿಸಿದ್ದಕ್ಕೆ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಮೇಲೆ ಪುಂಡರ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹಂಪಾಪುರ ಬಳಿ ನಡೆದಿದೆ.ನಿನ್ನೆ ತಡರಾತ್ರಿ ಘಟನೆ ನಡೆದಿದೆ.
ನಿನ್ನೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಚಾಲಕ ಮಾದೇಗೌಡ್​ ಮತ್ತು ನಿರ್ವಾಹಕ ಸ್ವಾಮಿಗೌಡ್​ ಸಂಚರಿಸುತ್ತಿದ್ದರು. ಈ ವೇಳೆ ಹೆಬ್ಬಾಡಿ-ಮೈಸೂರು ಮಾರ್ಗದ ಮಧ್ಯದಲ್ಲೇ ಯುವಕರ ಗುಂಪೊಂದು ಮದ್ಯಪಾನದಲ್ಲಿ ತೊಡಗಿತ್ತು, ಇದನ್ನು ಕಂಡ ಡ್ರೈವರ್ ಮತ್ತು ಕಂಡಕ್ಟರ್​ ರಸ್ತೆ ಬಿಡುವಂತೆ ಮನವಿ ಮಾಡಿದ್ದಾರೆ. ಇಷ್ಟಕ್ಕೆ ಕೆರಳಿದ ಪುಂಡರು ಚಾಲಕ ಮತ್ತು ಕಂಡಕ್ಟರ್​ ಮೇಲೆ ಮನಬಂದಂತೆ ಹಲ್ಲೆ ಮಾಡಿದೆ.

 

ಈ ವೇಳೆ ಚಾಲಕ ಮಾದೇಗೌಡ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇವಲ ಚಾಲಕನ ಮೇಲೆ ಮಾತ್ರವಲ್ಲದೇ ಯುವಕರು ಬಸ್​ನ ಮೇಲೂ ಕೂಡ ಕಲ್ಲಿನಿಂದ ದಾಳಿ ನಡೆಸಿದ್ದು, ಘಟನೆ ಸಂಬಂಧ ಚಾಲಕ ಮತ್ತು ನಿರ್ವಾಹಕ ಪೊಲೀಸರಿಗೆ ದೂರು ನೀಡಿದ್ದಾರೆ,
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಕಲ್ಲು ತೂರಿದ್ದಲ್ಲದೇ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ. ಇತ್ತೀಚಿಗೆ ಈ ರೀತಿಯ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ಸೂಕ್ತ ರಕ್ಷಣೆ ಒದಗಿಸಬೇಕಿದೆ.