ವರನಟ ಡಾ.ರಾಜಕುಮಾರ್​ ಅಪಹರಣ ಪ್ರಕರಣ- 18 ವರ್ಷಗಳ ಬಳಿಕ ತೀರ್ಪು ಪ್ರಕಟ- 9 ಆರೋಪಿಗಳ ಖುಲಾಸೆ!

ದೇಶವನ್ನೇ ಬೆಚ್ಚಿಬೀಳಿಸಿದ್ದ ಕನ್ನಡದ ವರನಟ ಡಾ.ರಾಜಕುಮಾರ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಪ್ರಕಟವಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳ ಸಾವಿನ ನಂತರ ಹಾಗೂ ಘಟನೆ ನಡೆದ 18 ವರ್ಷಗಳ ನಂತರ ತೀರ್ಪು ಪ್ರಕಟಗೊಂಡಿದ್ದು, ಸಾಕ್ಷ್ಯಾಧಾರ ಕೊರತೆಯಿಂದ 9 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ad 

2000 ನೇ ಇಸ್ವಿಯಲ್ಲಿ ನಡೆದ ಡಾ.ರಾಜಕುಮಾರ್​ ಅಪಹರಣ ಪ್ರಕರಣವನ್ನು 2011 ರಲ್ಲಿ ತಮಿಳುನಾಡಿನ ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಪ್ರಕರಣದಲ್ಲಿ ಕಾಡುಗಳ್ಳ ವೀರಪ್ಪನ, ಸೇತುಕುಳಿ ಗೋವಿಂದನ್ ಸೇರಿ 14 ಜನರ ಮೇಲೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿತ್ತು. ಈ ಪೈಕಿ ವೀರಪ್ಪನ ಸೇರಿದಂತೆ ನಾಲ್ವರು ಆರೋಪಿಗಳು ಈಗಾಗಲೇ ಸಾವನ್ನಪ್ಪಿದ್ದಾರೆ.

 

ಐವರು ಆರೋಪಿಗಳು ಜೈಲಿನಲ್ಲಿದ್ದರು. ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಸಾಕ್ಷ್ಯಾಧಾರ ಕೊರತೆಯಿಂದ 9 ಜನರನ್ನು ಖುಲಾಸೆಗೊಳಿಸಿದೆ. ನ್ಯಾಯಾಧೀಶರಾದ ಕೆ.ಮಣಿ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ವೀರಪ್ಪನ 2004 ರಲ್ಲಿಯೇ ಎಸ್​​ಟಿಎಫ್​​ ಎನ್​ಕೌಂಟರ್​ಗೆ ಬಲಿಯಾಗಿದ್ದ. ಇದೀಗ ಜೈಲಿನಲ್ಲಿದ್ದ ಐವರು ಆರೋಪಿಗಳು ದೋಷಮುಕ್ತರಾಗಿದ್ದಾರೆ.
2000 ನೇ ಇಸ್ವಿಯಲ್ಲಿ ಡಾ.ರಾಜಕುಮಾರ್ ಅವರನ್ನು ಅವರ ಗಾಜನೂರು ನಿವಾಸದಿಂದ ಅಪಹರಿಸಲಾಗಿತ್ತು. ಬಳಿಕ ಎರಡು ಸರ್ಕಾರಗಳ ಪ್ರಯತ್ನದಿಂದ 108 ದಿನಗಳ ಬಳಿಕ ಡಾ.ರಾಜಕುಮಾರ್ ಬಿಡುಗಡೆಗೊಂಡಿದ್ದರು. ಇದೀಗ ಬರೋಬ್ಬರಿ 18 ವರ್ಷಗಳ ಬಳಿಕ ತೀರ್ಪು ಪ್ರಕಟಗೊಂಡಿದೆ.