ನಟ ದುನಿಯಾ ವಿಜಯ್ ಜಾಮೀನು ಅರ್ಜಿ- ಸೋಮವಾರಕ್ಕೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ!

 ಜಿಮ್ ಟ್ರೇನರ್ ಮಾರುತಿಗೌಡ್ ಮೇಲೆ ಹಲ್ಲೆ ಮಾಡಿ ಜೈಲು ಸೇರಿರುವ ನಟ ದುನಿಯಾ ವಿಜಿ ಜಾಮೀನು ಅರ್ಜಿ ತೀರ್ಪು ಸೋಮವಾರಕ್ಕೆ ಮುಂದೂಡಿಕೆಯಾಗಿದ್ದು, ದುನಿಯಾ ವಿಜಯ್ ಸೋಮವಾರದವರೆಗೆ ಜೈಲಿನಲ್ಲೇ ಇರಬೇಕಾಗಿದೆ.
ಮೊನ್ನೆ 8 ನೇ ಎಸಿಎಂಎಂ ನ್ಯಾಯಾಲಯ ಸಂತ್ರಸ್ಥ ಮಾರುತಿ ಗೌಡ್ ಆಸ್ಪತ್ರೆಯಲ್ಲೇ ಇರೋ ಹಿನ್ನೆಲೆಯಲ್ಲಿ ಹಾಗೂ ಆರೋಪಿತರು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಗೆ ಜಾಮೀನು ನಿರಾಕರಿಸಿತ್ತು. ಬಳಿಕ ದುನಿಯಾ ವಿಜಯ್ ಪರ ವಕೀಲರು ಸೆಷನ್ಸ ನ್ಯಾಯಾಲಯದ ಮೊರೆ ಹೋಗಿದ್ದರು.

ಇದೀಗ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯದ ಮುಂದೇ ದುನಿಯಾ ವಿಜಿ ಹಾಗೂ ತಂಡದ ಪರ ಆರ್.ಶ್ರೀನಿವಾಸ್ ವಾದ ಮಂಡಿಸಿದರು. ಗಾಯಾಳುವಿನ ಹೇಳಿಕೆಯಲ್ಲಿ ವ್ಯತ್ಯಾಸವಿದೆ. ಗಾಯಾಳು ಡಿಸ್ಚಾರ್ಜ್ ಕೂಡ ಆಗಿದ್ದಾನೆ. ಹೀಗಾಗಿ ದುನಿಯಾ ವಿಜಿ ಜಾಮೀನು ನೀಡಬೇಕು. ಸೆಲಿಬ್ರೆಟಿ ಎಂಬ ಕಾರಣಕ್ಕೆ ಜಾಮೀನು ನಿರಾಕರಣೆ ಸರಿಯಲ್ಲ ಎಂದು ವಾದ ಮಂಡಿಸಿದರು. ಅಲ್ಲದೇ ಮಾರುತಿಗೌಡ್​ನನ್ನು ಕಿಡ್ನಾಪ್ ಮಾಡಲಾಗಿಲ್ಲ. ದುನಿಯಾ ವಿಜಯ್ ಸ್ವತಃ ಅವರನ್ನು ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಶ್ರೀನಿವಾಸ ನ್ಯಾಯಾಲಯದ ಮುಂದೇ ವಾದ ಮಂಡಿಸಿದ್ದಾರೆ.
ಇನ್ನು ಸರ್ಕಾರಿ ಅಭಿಯೋಜಕರಿಗೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ ನ್ಯಾಯಾಲಯ ಜಾಮೀನು ಅರ್ಜಿಯ ತೀರ್ಪನ್ನು ಸೋಮವಾರಕ್ಕೆ ಮುಂದೂಡಿದೆ. ಇನ್ನು ಸೋಮವಾರದ ತನಕ ದುನಿಯಾ ವಿಜಯ್ ಜೈಲಿನಲ್ಲೇ ಇರುವಂತಾಗಿದ್ದು, ಸೋಮವಾರ ಜೈಲಾ-ಬೇಲಾ ಕಾದುನೋಡಬೇಕಿದೆ.