ಡಾಕ್ಯುಮೆಂಟ್ ಕೇಳಿದ್ದಕ್ಕೆ ಬೈಕ್ ಗೆ ಬೆಂಕಿ ಹಚ್ಚಿ ಪರಾರಿಯಾದ ಬೈಕ್ ಸವಾರ !

ಕಲಬುರಗಿ‌: ತಪಾಸಣೆ ವೇಳೆ ಅಗತ್ಯ ದಾಖಲೆ ನೀಡದಿದ್ದಕ್ಕೆ ಪೊಲೀಸರು ಜಪ್ತಿ ಮಾಡಿಕೊಂಡು‌ ಹೋಗುತ್ತಿದ್ದ ಬೈಕ್ ಗೆ ಬೈಕ್ ಸವಾರನೇ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯ ಮೋಹನ್ ಲಾಡ್ಜ್ ಬಳಿ‌ ನಡೆದಿದೆ. ಎಂದಿನಂತೆ ಕಲಬುರಗಿ ಸಂಚಾರಿ ಪೊಲೀಸರು ಕಲಬುರಗಿ ಬಸ್ ನಿಲ್ದಾಣದ ಬಳಿ ಬೈಕ್ ಲೈಸೆನ್ಸ್ ಸೇರಿದಂತೆ ಇತರ‌ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಕೆಎ 32 ವಿ 5089 ಸಂಖ್ಯೆಯ ಬೈಕ್ ನಲ್ಲಿ‌ ತೆರಳುತ್ತಿದ್ದ ಸವಾರನನ್ನು‌ ತಡೆದು‌ ದಾಖಲೆ ಪರಿಶೀಲನೆಗೆ ಮುಂದಾಗಿದ್ದಾರೆ. ಈ‌‌ ವೇಳೆ ಬೈಕ್ ಸವಾರ ತಾನು ಜೇವರ್ಗಿಯವನು ತನ್ನ ಬಳಿ ದಾಖಲೆಗಳು‌ ಇಲ್ಲ ಎಂದಿದ್ದಾನೆ. ಈ‌ ವೇಳೆ ಸಂಚಾರಿ ಪೊಲೀಸರು ಬೈಕ್ ವಶಕ್ಕೆ ಪಡೆದು ಸ್ಟೇಷನ್ ಗೆ ಬಂದು ಬೈಕ್ ದಾಖಲೆ ತೋರಿಸಿ ಬೈಕ್ ತಗೆದುಕೊಂಡು‌ ಹೋಗು ಎಂದು ಹೇಳಿ ಹೋಮ್ ಗಾರ್ಡ್ ಬಳಿ ಬೈಕ್ ಕೊಟ್ಟು ಸ್ಟೇಷನ್ ಗೆ ಹೋಗಿ ಬೈಕ್ ಪಾರ್ಕ್ ಮಾಡಲು ತಿಳಿಸಿದ್ದಾರೆ. ಈ ವೇಳೆ ಬೈಕ್ ನಲ್ಲಿ ತೆರಳುತ್ತಿದ್ದ ಹೋಮ್ ಗಾರ್ಡ್ ನನ್ನು ಹಿಂಬಾಲಿಸಿಕೊಂಡು ಬಂದ್ ಬೈಕ್ ಸವಾರ ಅಡ್ಡಗಟ್ಟಿದ್ದಾನೆ. ಈ ವೇಳೆ ಹೋಮ್ ಗಾರ್ಡ್ ಜೊತೆ ವಾಗ್ವಾದ ನಡೆಸಿ ಬೈಕ್ ನ ಪೆಟ್ರೋಲ್ ಪೈಪ್ ಕಿತ್ತು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ತಕ್ಷಣವೇ ಸ್ಥಳೀಯರು ಬಕೆಟ್ ಗಳಲ್ಲಿ‌ ನೀರು ತಗೆದುಕೊಂಡು‌ ಬಂದು ಬೈಕ್ ಗೆ ಹತ್ತಿದ್ದ ಬೆಂಕಿ‌ ನಂದಿಸಿದ್ದಾರೆ. ಬಳಿಕ ಸಂಚಾರಿ ಪೊಲೀಸರು ಮಿನಿವಿಧಾನಸೌಧ ಹಿಂಬದಿಯಲ್ಲಿರುವ ಸಂಚಾರಿ‌ ಪೊಲೀಸ್ ಠಾಣೆಗೆ ಬೈಕ್ ತಗೆದುಕೊಂಡು‌ ಹೋಗಿದ್ದಾರೆ. ಸದ್ಯ ಪರಾರಿಯಾಗಿರುವ ಬೈಕ್ ಚಾಲಕನಿಗಾಗಿ‌‌ ಪೊಲೀಸರು ಬಲೆ ಬೀಸಿದ್ದಾರೆ.