ಬರ್ತಡೇ ಆಚರಿಸಿಕೊಳ್ಳಲು ಬಂದು ಹೆಣವಾದ ಹುಡುಗ- ಕೇಂದ್ರಿಯ ವಿವಿ ಆವರಣದಲ್ಲಿ ಘಟನೆ!

 

ಸ್ನೇಹಿತೆಯ ಜೊತೆ ಹುಟ್ಟುಹಬ್ಬ ಆಚರಿಸಲೆಂದು ಬಂದ ಯುವಕನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಆಳಂದ ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಬಳಿ ನಿನ್ನೆ ಸಂಜೆ 7.30ರ ಸುಮಾರಿಗೆ ನಡೆದಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ(ಡಬ್ಲ್ಯೂ) ಗ್ರಾಮದ ಪ್ರಸಾದ್(23) ಮೃತ ದುರ್ದೈವಿ. ಹೈದರಾಬಾದ್‌ನ ಕೆಮಿಕಲ್ ಫ್ಯಾಕ್ಟರಿವೊಂದರಲ್ಲಿ ಕೆಲಸ ಮಾಡುತ್ತಿದ್ದ. ಪ್ರಸಾದ್ ನಿನ್ನೆ ಬೆಳಗ್ಗೆ ಕಲಬುರಗಿ ನಗರಕ್ಕೆ ಆಗಮಿಸಿದ್ದ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಸ್ನೇಹಿತೆಯ‌ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಕಲಬುರಗಿಗೆ ಆಗಮಿಸಿದ್ದ‌.

ನಿನ್ನೆ ಸಂಜೆ 5.30 ರಿಂದ 7.30ರ ಮಧ್ಯದಲ್ಲಿ ವಿವಿ ಕ್ಯಾಂಪಸ್ ಆವರಣದಲ್ಲಿ ಸ್ನೇಹಿತೆಯ ಜೊತೆ ಮಾತನಾಡುತ್ತಾ ನಿಂತಿದ್ದಾಗ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಎಸ್‌ಪಿ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.