ಸಮ್ಮಿಶ್ರ ಸರ್ಕಾರ ಬಿದ್ದರೆ ಬಿಜೆಪಿ ಹೊಣೆಯಲ್ಲ !! ಹೀಗ್ಯಾಕೆ ಅಂದರು ಯಡಿಯೂರಪ್ಪ !!

 

 ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಕೈಹಾಕಲ್ಲ. ಆದರೆ ಅವರಾಗಿಯೇ ಕಚ್ಚಾಡಿಕೊಂಡು ಸರ್ಕಾರ ಕುಸಿದರೆ ಅದಕ್ಕೆ ಬಿಜೆಪಿ ಜವಾಬ್ದಾರಿ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಕಾಂಗ್ರೆಸ್ ಹಿರಿಯ ನಾಯಕ ಮಾಜಿ‌ ಸಚಿವ ಬಾಬುರಾವ್ ಚಿಂಚನಸೂರ್ ಹಾಗೂ ಪತ್ನಿ ಅಮರೇಶ್ವರಿಬಾಬು ಚಿಂಚನಸೂರ್ ಇಂದು ಬಿಜೆಪಿ ಪಕ್ಷ ಸೇರಿದರು. ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚಿಂಚನಸೂರು ದಂಪತಿಗೆ ಪಕ್ಷದ ಶಾಲು ನೀಡಿ‌ ಸ್ವಾಗತಿಸಿದರು.

 

ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಈ ಸರ್ಕಾರ ಇದೆ ಎಂದು ಯಾರಿಗೂ ಅನ್ನಿಸುತ್ತಿಲ್ಲ, ರಾಜ್ಯದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ, 13 ಜಿಲ್ಲೆಗಳಲ್ಲಿ ಭೀಕರ ಬರ ಎದುರಾಗಿದೆ, ಉಳಿದ‌ಕಡೆ ಅತಿವೃಷ್ಠಿ ಸಂಕಷ್ಟ ಎದುರಾಗಿದೆ ಆದರೆ ವಿಧಾನಸೌಧದಲ್ಲಿ ಸಂಪುಟ ಸದಸ್ಯರು ಸಿಗದ ಪರಿಸ್ಥಿತಿ ಇದೆ,ರಾಜ್ಯದಲ್ಲಿ ಓಡಾಡಿ ಸಮಸ್ಯೆ ಆಲಿಸುತ್ತಿಲ್ಲ, ವಿಧಾನಸೌಧದಲ್ಲೂ ಸಿಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗು ಸಿಎಂ ಕುಮಾರಸ್ವಾಮಿ ನಡುವೆ ಭಿನ್ನಾಭಿಪ್ರಾಯ, ಗೊಂದಲ ಸೃಷ್ಠಿಯ ಪರಿಣಾಮ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇಂತಹ ಗೊಂದಲದ ನಡುವೆ ಯಾವುದೇ ಹೇಳಿಕೆ‌ ಕೊಡಬಾರದು ಎಂದು ನಮ್ಮ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದೇನೆ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನು ನಾವು ಮಾಡುತ್ತಿಲ್ಲ‌. ಅವರಾಗಿಯೇ ಕುಸಿದು ಬಿದ್ದರೆ ಅದಕ್ಕೆ ನಾವು ಜವಾಬ್ದಾರಿ ಅಲ್ಲ ಎಂದರು.ಬಿ ಎಸ್ ಯಡಿಯೂರಪ್ಪರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮೊನ್ನೆಯಷ್ಟೇ ಬಿಎಸ್ ವೈ ಅಪ್ತ, ಮಾಜಿ ಕೇಂದ್ರ ಸಚಿವ ಬಸವನಗೌಡ ಯತ್ನಾಳ್, ಶ್ರಾವಣದ ಕಡೇ ಸೋಮವಾರ ಸರಕಾರ ಕುಸಿದುಬೀಳಲಿದೆ ಎಂದಿದ್ದರು.