ಅಂತೂ ಇಂತೂ ರಚನೆಯಾಯ್ತು ಮಂತ್ರಿಮಂಡಳ- ರಾಜ್ಯದಾದ್ಯಂತ ಭುಗಿಲೆದ್ದ ಅಸಮಧಾನ-ಆಕ್ರೋಶಕ್ಕೆ ಕಾಂಗ್ರೆಸ್​ನಲ್ಲಿ ತಳಮಳ!

 

ad

ಅತ್ತ ಸಿಎಂ ಕುಮಾರಸ್ವಾಮಿ- ಡಿಸಿಎಂ ಪರಮೇಶ್ವರ್​​ ಸರ್ಕಾರ ರಚನೆ ಮಾಡಿ ನಿಟ್ಟುಸಿರು ಬಿಡುವಷ್ಟರಲ್ಲೇ ಅಸಮಧಾನ ಭುಗಿಲೆದ್ದಿದೆ. ಅಳೆದು ತೂಗಿ ರಚಿಸಲಾಗಿದ್ದ ಸಚಿವ ಸಂಪುಟದಲ್ಲಿ ಕಾಂಗ್ರೆಸ್​​ನ ಹಲವು ಹಿರಿಯ ನಾಯಕರಿಗೆ ಸ್ಥಾನ ಲಭ್ಯವಾಗಿಲ್ಲ. ಹೀಗಾಗಿ ಎಂ.ಬಿ.ಪಾಟೀಲ್​ ಸೇರಿದಂತೆ ಹಲವು ನಾಯಕರು ಅಸಮಧಾನಗೊಂಡಿದ್ದು, ರಾಜ್ಯದ ಹಲವೆಡೆ ಬೆಂಬಲಿಗರ ಆಕ್ರೋಶ ಮುಗಿಲುಮುಟ್ಟಿದೆ.ಹೌದು ಪ್ರಮುಖವಾಗಿ ರಾಜ್ಯದಲ್ಲಿ ಲಿಂಗಾಯತ್​ ಪ್ರತ್ಯೇಕ ಧರ್ಮ ಹೋರಾಟದ ನೇತೃತ್ವ ವಹಿಸಿದ್ದ ಎಂ.ಬಿ.ಪಾಟೀಲ್​ರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದ್ದು, ಇದು ಎಂ .ಬಿ.ಪಾಟೀಲ್​ ಬೆಂಬಲಿಗರ ತೀವ್ರ ಅಸಮಧಾನಕ್ಕೆ ಕಾರಣವಾಗಿದೆ. ಬೆಂಗಳೂರಿನ ಎಂ.ಬಿ.ಪಾಟೀಲ್​ ನಿವಾಸದಲ್ಲಿ ಬೆಳಗ್ಗೆನಿಂದಲೂ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಸಂಧಾನಕ್ಕೆ ಬಂದ ರಿಜ್ವಾನ್, ವಿನಯಕುಲಕರ್ಣಿಯನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಎಂ.ಬಿ.ಪಾಟೀಲ್​ ಸ್ವಕ್ಷೇತ್ರ ಬಬಲೇಶ್ವರದಲ್ಲೂ ಕಾರ್ಯಕರ್ತರ ಆಕ್ರೋಶ ಮುಗಿಲುಮುಟ್ಟಿದ್ದು, ಟೈರ್​​ಗೆ ಬೆಂಕಿ ಹಚ್ಚಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಎಂ.ಬಿ.ಪಾಟೀಲ್​ ಬೆಂಬಲಿಸಿ, ವಿಜಯಪುರ ಜಿಲ್ಲಾ ಪಂಚಾಯ್ತಿಯ 4 ಸದಸ್ಯರ ರಾಜೀನಾಮೆಗೆ ನಿರ್ಧರಿಸಿದ್ದಾರೆ. ಜಿ.ಪಂ. ಸದಸ್ಯರಾದ ಉಮೇಶ ಕೋಳಕೂರ, ಪ್ರತಿಭಾ ಪಾಟೀಲ, ಸುಜಾತಾ ಕಳ್ಳಿಮನಿ, ರಾಜು ಪವಾರ ರಾಜೋನಾಮೆಗೆ ನಿರ್ಧರಿಸಿದ್ದಾರೆ.

  ಇನ್ನು ಸದಾಕಾಲ ಪಕ್ಷಕ್ಕಾಗಿ ದುಡಿದಿದ್ದ ಸತೀಶ್ ಜಾರಕಿಹೊಳಿಯವರನ್ನು ಸಚಿವ ಸ್ಥಾನದಿಂದ ಕೈಬಿಡಲಾಗಿದೆ. ಇದನ್ನು ಖಂಡಿಸಿ, ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದಾದ್ಯಂತ ಪ್ರತಿಭಟನೆ ತೀವ್ರಗೊಂಡಿದ್ದು, ರಸ್ತೆಯಲ್ಲೇ ಟೈರ್ ಸುಟ್ಟು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಬಲಿಗರ ಪ್ರತಿಭಟನೆಯಿಂದ ರಸ್ತ ಸಂಚಾರ ಕೂಡ ಅಸ್ತವ್ಯಸ್ಥವಾಗಿದೆ.
ಇನ್ನು ಭದ್ರಾವತಿಯಲ್ಲಿ ಕಾಂಗ್ರೆಸ್​ ಶಾಸಕ ಬಿ.ಕೆ.ಸಂಗಮೇಶ್​​ ಅಸಮಧಾನ ವ್ಯಕ್ತಪಡಿಸಿದ್ದು,ಶಿವಮೊಗ್ಗದ ಬಿಜೆಪಿ ಭದ್ರ ಕೋಟೆಯಲ್ಲಿ ಗೆದ್ದು ಬಂದಿದ್ದೇನೆ. ವೀರಶೈವ ಗಾಣಿಗದಲ್ಲಿ ನಾನೂಬ್ಬನೆ ಗೆದ್ದು ಬಂದಿದ್ದೇನೆ.ಶಾಸಕನಾಗಿ ಕೆಲ್ಸ ಮಾಡುವ ಅವಕಾಶ ಕಡಿಮೆ, ಮಂತ್ರಿ ಸ್ಥಾನ ನೀಡಿದ್ರೆ ಹೆಚ್ಚಿನ ಕೆಲ್ಸ ಮಾಡಬಹುದು.ನನ್ನ ಸ್ವಾರ್ಥದಿಂದ ನಾನು ಮಂತ್ರಿ ಸ್ಥಾನ ಕೇಳಿಲ್ಲ. ಜಿಲ್ಲೆಯ ಅಭಿವೃದ್ದಿಗೆ ಮಂತ್ರಿ ಸ್ಥಾನ ಕೇಳಿದ್ದೇನೆ.ಮಂತ್ರಿ ಸ್ಥಾನ ನೀಡದೆ ಹೋದ್ರೆ, ಮುಂದಿನ ದಿನಗಳಲ್ಲಿ ಮತದಾರರು ಹಾಗೂ ಹಿತೈಷಿಗಳು, ಜಿಲ್ಲಾ ಮುಖಂಡರುಗಳ ಜೊತೆ ಸೇರಿ ಮುಂದಿನ ನಿರ್ಧಾರ. ಕಾರ್ಯಕರ್ತರು ಒಪ್ಪಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಂ ಹೆಬ್ಬಾರ್, ಲಕ್ಷ್ಮೀ ಹೆಬ್ಬಾಳಕರ್​, ಶ್ಯಾಮನೂರ ಶಿವಶಂಕರಪ್ಪ,ಎಂ.ಟಿ.ಬಿ.ನಾಗರಾಜ, ಸಿ.ಎಸ್.ಶಿವಳ್ಳಿ, ತನ್ವೀರ್ ಶೇಠ್​​, ರಾಮಲಿಂಗಾ ರೆಡ್ಡಿ, ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ಸಿಗರಿಗೆ ಮಂತ್ರಿ ಸ್ಥಾನ ನೀಡದೇ ಇರೋದು ತೀವ್ರ ಅಸಮಧಾನಕ್ಕೆ ಕಾರಣವಾಗಿದೆ. ಇನ್ನು ಈ ಅಸಮಧಾನ ತೀವ್ರಗೊಳ್ಳುವ ಎಲ್ಲ ಸಾಧ್ಯತೆಗಳಿದ್ದು, ಮೂಲಗಳ ಪ್ರಕಾರ ಎಂ.ಬಿ.ಪಾಟೀಲ್​ಗೆ ಸಚಿವ ಸ್ಥಾನ ನೀಡದೇ ಇರೋದು ಕಾಂಗ್ರೆಸ್​ಗೆ ಭಾರಿ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಶತಾಯ-ಗತಾಯ ರಚನೆಯಾದ ಮಂತ್ರಿಮಂಡಲ ಸಮ್ಮಿಶ್ರ ಸರ್ಕಾರದ ಆಯುಷ್ಯಿಗೆ ಕುತ್ತು ತರುವ ಎಲ್ಲ ಮುನ್ಸೂಚನೆ ನೀಡಿದೆ.