ಎದೆಯೆತ್ತರದ ನೀರಿನಲ್ಲಿ ಸಾಗಿ ಅಂತ್ಯ ಸಂಸ್ಕಾರ!!. ಇದ್ಯಾವ ತರಹದ ಸಂಪ್ರದಾಯ ಅಂತೀರಾ? ಈ ಸುದ್ದಿ ನೋಡಿ

ಸೇತುವೆ ಕುಸಿದ ಪರಿಣಾಮ ವೃದ್ಧೆಯೋರ್ವಳ ಮೃತದೇಹವನ್ನು ಎದೆಯೆತ್ತರದಲ್ಲಿ ಹರಿಯುವ ಹಳ್ಳದಲ್ಲಿ ಹರಸಾಹಸದೊಂದಿಗೆ ಸಾಗಿಸಿದ ಘಟನೆ ಅಂಕೋಲಾ ತಾಲೂಕಿನ ಖೇಣಿ ಗ್ರಾಮದಲ್ಲಿ ನಡೆದಿದೆ.

 

ತಾಲ್ಲೂಕಿನ ಖೇಣಿ ಗ್ರಾಮದ ಸುಶೀಲ (೮೦) ಮೃತಪಟ್ಟ ವೃದ್ಧೆ. ಉತ್ತರಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಇದರ ಪರಿಣಾಮ ಅಂಕೋಲಾ ತಾಲೂಕಿನ ಖೇಣಿ ಬಳಿಯ ರುಧ್ರಭೂಮಿಗೆ ಸಂಪರ್ಕ ಕಲ್ಪಿಸಿದ್ಧ ಸೇತುವೆ ಕುಸಿದು ಬಿದ್ದಿದೆ. ಇದರಿಂದ ಸ್ಮಶಾನಕ್ಕೆ ಸಂಪರ್ಕ ಕಡಿತಗೊಂಡಿದ್ದು, ಇಂದು ಬೆಳಿಗ್ಗೆ ಮೃತಪಟ್ಟಿದ್ದ ವೃದ್ಧೆಯ ಶವವವನ್ನು ಸಾಗಿಸಲಾಗದೆ ಸ್ಥಳೀಯರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು.

ಮೊದಲು ದೋಣಿ ತಂದು ಶವದಾಟಿಸುವ ಬಗ್ಗೆ ಚರ್ಚಿಸಲಾಗಿತ್ತಾದರು ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ಸ್ಥಳೀಯ ಎಂಟತ್ತು ಮಂದಿಯೇ ಹರ ಸಾಹಸದೊಂದಿಗೆ ನೀರಿ‌ಗಿಳಿದು ಎದೆಯೆತ್ತರಕ್ಕೆ ಹರಿಯುತ್ತಿರುವ ಹಳ್ಳದಲ್ಲಿ ಮೃತದೇಹವನ್ನು ಹೊತ್ತುಕೊಂಡು ಸಾಗಿಸಿದ್ದಾರೆ. ಬಳಿಕ ರುಧ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿಸ ಸ್ಥಳೀಯರು ಮತ್ತೆ ಅದೇ ರಿತಿ ನೀರಿನಲ್ಲಿ ದಾಟಿದ್ದಾರೆ.

ಸೇತುವೆಯನ್ನು ವರ್ಷದ ಹಿಂದೆ ಕಟ್ಟಿದ್ದರು ಕೂಡ ಕುಸಿದು ಬಿದ್ದಿದ್ದು, ಕಳಪೆ ಕಾಮಗಾರಿಯ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಮಳೆಗೆ ಸೇತುವೆ ಕುಸಿದು ಬಿದ್ದ ಪರಿಣಾಮ ರುದ್ರಭೂಮಿಗೆ ಸಂಪರ್ಕ ಇಲ್ಲದಂತಾಗಿದ್ದು, ಕೂಡಲೇ ಸೇತುವೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.