ತುಮಕೂರು ವಿಜೇತ ಪಾಲಿಕೆ ಸದಸ್ಯನ ಮೇಲೆ ರಾಸಾಯನಿಕ ದಾಳಿ- ಆಸ್ಯಿಡ್​ ಎರಚಿರುವ ಶಂಕೆ- 30 ಜನರಿಗೆ ಗಾಯ!

ಚುನಾವಣೆಯಲ್ಲಿ ಸೋಲು-ಗೆಲುವು ಎಲ್ಲ ಸಾಮಾನ್ಯ. ಆದರೇ ಇಲ್ಲಿ ಮಾತ್ರ ಚುನಾವಣೆಯ ಸೋಲು ಅಪರಾಧ ಕೃತ್ಯವೊಂದರಲ್ಲಿ ಅಂತ್ಯವಾಗಿದೆ. ಹೌದು ತುಮಕೂರು ಪಾಲಿಕೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯ ಮೇಲೆ ರಾಸಾಯನಿಕ ದಾಳಿ ನಡೆದಿದ್ದು, ರಾಜ್ಯವೇ ಬೆಚ್ಚಿ ಬಿದ್ದಿದೆ.

ತುಮಕೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ‌ಯಲ್ಲಿ ವಾರ್ಡ್ ನಂಬರ್ ೧೬ ರ ಕಾಂಗ್ರೆಸ್ ಸದಸ್ಯ ಇನಾಯತುಲ್ಲಾ ಖಾನ್ ಗೆಲುವು ಸಾಧಿಸಿದ್ದರು. ಅದರ ಸಂಭ್ರಮಕ್ಕಾಗಿ ಮೆರವಣಿಗೆ ಮಾಡುತ್ತಿದ್ದ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ರಾಸಾಯನಿಕವೊಂದನ್ನು ಎಸೆದು ಪರಾರಿಯಾಗಿದ್ದಾರೆ.

ಈ ರಾಸಾಯನಿಕ ದಾಳಿಯಿಂದ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೋತಿತೋಪಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾರ್ಡ್​ ನಂ 16 ರ ಬಾರ್ ಲೈನ್​ ರಸ್ತೆಯಲ್ಲಿ ಘಟನೆ ನಡೆದಿದೆ.


ಇನಾಯತುಲ್ಲಾ ವಿರುದ್ಧ ಸೋತ ಅಭ್ಯರ್ಥಿಯ ಕಡೆಯವರು ರಾಜಕೀಯ ದ್ವೇಷದಿಂದ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ತುಮಕೂರು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ರಾಸಾಯನಿಕ ಆಸ್ಯಿಡ್​ ಇರಬಹುದೆಂದು ಶಂಕಿಸಲಾಗಿದೆ.