ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ಬಂದ್​ ಕರೆ- ರಾಜಧಾನಿ ಸಂಪೂರ್ಣ ಸ್ಥಬ್ಧ!

 

ad

ಪೆಟ್ರೋಲ್ ದರ ಏರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕರೆ ನೀಡಿರುವ ಭಾರತ ಬಂದ್​ಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಾದ್ಯಂತ ಬಿಎಂಟಿಸಿ ಬಸ್​ಗಳು ರಸ್ತೆಗಿಳಿದಿಲ್ಲ. ಇನ್ನೊಂದೆಡೆ ನಗರದ ಎಲ್ಲೆಡೆ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ವಿವಿಧ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದೆ.
ನಗರದ ಬಹುತೇಕ ಮಾಲ್​ಗಳು ಮುಚ್ಚಿದ್ದು, ಮಾಲ್​ಗಳಿಗೆ ತೊಂದರೆಯಾಗದಂತೆ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇನ್ನು ಅಟೋಗಳ ಸಂಚಾರ ಎಂದಿನಂತೆ ಇದ್ದು, ಬಸ್​ಗಳು ಇಲ್ಲದೇ ಇರೋದರಿಂದ ಜನರು ಅಟೋಗಳ ಮೊರೆ ಹೋಗಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಿನಿಮಾ ಮಂದಿರಗಳು ಮುಚ್ಚಿದ್ದು, ಆಸ್ಪತ್ರೆಗಳು, ಮೆಡಿಕಲ್​ ಶಾಪ್​ಗಳು ಕಾರ್ಯನಿರ್ವಹಿಸುತ್ತಿವೆ. ಪೆಟ್ರೋಲ್ ದರ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಗಳು ಬಸ್​ಗಳಿಲ್ಲದೇ ಖಾಲಿಯಾಗಿದ್ದ ಮೆಜೆಸ್ಟಿಕ್​ನಲ್ಲಿ ಕ್ರಿಕೇಟ್​ ಆಡುವ ಮೂಲಕ ಪ್ರತಿಭಟನೆ ನಡೆಸಿದರು.

 

ಇನ್ನು ಜೆಡಿಎಸ್​ ಕೂಡ ಕಾಂಗ್ರೆಸ್​ ಬಂದ್​ಗೆ ಬೆಂಬಲ ನೀಡಿದ್ದು, ಟೌನ್​ ಹಾಲ್​ ಮುಂದೇ ಪ್ರತಿಭಟನೆ ನಡೆಸಿದೆ. ಪ್ರತಿಭಟನೆ ವೇಳೆ ಜೆಡಿಎಸ್​ ಧುರೀಣ ಶರವಣ ಕುದುರೆ ಏರಿ ಜೆಡಿಎಸ್​ ಧ್ವಜ ಹಿಡಿದು ಬಂದು ಗಮನ ಸೆಳೆದರು. ಇನ್ನು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್​ ಕಾರ್ಯಕರ್ತರು ರಸ್ತೆ ಬಂದ್​ ನಡೆಸಿ ಪ್ರತಿಭಟಿಸಿದರು.
ನಗರದ ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದರಿಂದ ಮಕ್ಕಳು ಮನೆಯಲ್ಲೇ ಇದ್ದರೇ, ಹಲವು ಐಟಿ ಕಂಪನಿಗಳು, ಖಾಸಗಿ ಕಾರ್ಖಾನೆಗಳು ಕಚೇರಿಗಳು ಬಾಗಿಲು ಮುಚ್ಚಿದೆ. ಇನ್ನು ಕೆಲ ಸಂಸ್ಥೆಗಳು ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದು, ಉದ್ಯೋಗಿಗಳು ಕಚೇರಿಗೆ ತೆರಳಲು ಪರದಾಡಿದರು. ಬಂದ್​ ಹಿನ್ನೆಲೆಯಲ್ಲಿ ಯಾವಾಗಲೂ ಜನನಿಬಿಡವಾಗಿರುತ್ತಿದ್ದ ರಸ್ತೆಗಳು ಮಾತ್ರ ಬಿಕೋ ಎನ್ನುತ್ತಿದ್ದವು. ಒಟ್ಟಾರೆ ನಗರದಲ್ಲಿ ಬಂದ್​ ಸಂಪೂರ್ಣ ಯಶಸ್ವಿಯಾಗಿದೆ.