ಕೋರ್ಟ್ ಕಲಾಪವನ್ನೂ ಟಿವಿಯಲ್ಲೇ ನೋಡಬಹುದು !! ನೇರ ಪ್ರಸಾರಕ್ಕೆ ಸುಪ್ರಿಂ ಅಸ್ತು !!

ಇನ್ನು ಮುಂದೆ ಮನೆಯಲ್ಲೇ ಕುಳಿತುಕೊಂಡು ಕೋರ್ಟ್ ಕಲಾಪವನ್ನು ವೀಕ್ಷಿಸಬಹುದು. ಕೋರ್ಟ್ ಕಲಾಪಗಳ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಅಸ್ತು ಎಂದಿದ್ದು, ಪಾರದರ್ಶಕ ವ್ಯವಸ್ಥೆಯಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.ನ್ಯಾಯಾಲಯದಲ್ಲಿ ವಿಚಾರಣೆಗಳ ನೇರ ಪ್ರಸಾರ ಯಾವ ರೀತಿ ಇರಬೇಕು ? ಸ್ವರೂಪ ಯಾವ ರೀತಿಯದ್ದು ಎಂಬುದರ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸುಂತೆ ಸರ್ಕಾರಕ್ಕೆ ಹೇಳಿದೆ.

ಜನ ನೇರವಾಗಿ ಕೋರ್ಟ್ ನಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ಪಡೆಯಲಿ. ಆ ಮೂಲಕ ಇಲ್ಲದ ಊಹೋಪೋಹಗಳನ್ನು ತಡೆಯಬಹುದಾಗಿದೆ. ಕೋರ್ಟ್ ಕಲಾಪ ನೇರ ಪ್ರಸಾರ ಸಂಬಂಧ ಸಾರ್ವಜನಿಕ ಹಕ್ಕುಗಳ ಸಮತೋಲನಕ್ಕೆ ಅಗತ್ಯ ನಿಯಮಗಳು ಮತ್ತು ದಾವೆದಾರರ ಘನತೆಯನ್ನು ರಕ್ಷಿಸುವ ಕುರಿತು ಶೀಘ್ರ ನಿಯಮ ರಚನೆಯಾಗುತ್ತದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಈ ಕುರಿತು ಸೂಕ್ತ ಮಾರ್ಗಸೂಚಿ ರೂಪಿಸುವಂತೆ ಸರ್ಕಾರಕ್ಕೆ ಹೇಳಿದೆ.

ಸಾರ್ವಜನಿತ ಹಿತಾಸಕ್ತಿ ದೃಷ್ಟಿಯಿಂದ ಮತ್ತು ಪಾರದರ್ಶಕತೆ ಇರಲಿ ಎಂಬ ಕಾರಣಕ್ಕೆ ಕೋರ್ಟ್ ಕಲಾಪಗಳ ನೇರ ಪ್ರಸಾರಕ್ಕೆ ಅನುಮತಿ ನೀಡುತ್ತಿದ್ದೇವೆ ಎಂದು ಪೀಠ ಹೇಳಿದೆ.ಆದರೆ ಅತ್ಯಾಚಾರ, ವೈವಾಹಿಕ ಮತ್ತಿತರ ವಿಚಾರಗಳಲ್ಲಿನ ಗೌಪ್ಯ ವಿಚಾರಣೆಗಳನ್ನು ನೇರ ಪ್ರಸಾರ ಮಾಡುವಂತಿಲ್ಲ. ಸಾಮಾಜಿಕ, ರಾಜಕೀಯ, ನೀತಿ ರೂಪನೆಗಳ ಕಲಾಪಗಳ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.ನ್ಯಾಯಾಲಯಗಳಲ್ಲಿ ವಿಚಾರಣೆಗಳ ನೇರ ವೀಕ್ಷಣೆ, ವಿಡಿಯೊ ರೆಕಾರ್ಡಿಂಗ್ ಅಥವಾ ನ್ಯಾಯಾಂಗ ಪ್ರಕ್ರಿಯೆಗಳ ಲಿಪ್ಯಂತರಗಳ ಕುರಿತು ಸಲ್ಲಿಸಲಾಗಿದ್ದ ಮನವಿ ಬಗ್ಗೆ ತನ್ನ ಅಭಿಪ್ರಾಯ ತಿಳಿಸುವಂತೆ ಸುಪ್ರೀಂ ಕೋರ್ಟ್ ಕಳೆದ ಮೇ 3ರಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಇದಕ್ಕೆ ಈ ಹಿಂದೆ ತನ್ನ ಅಭಿಪ್ರಾಯ ತಿಳಿಸಿದ್ದ ಸರ್ಕಾರ ಪರ ವಕೀಲ ಅಟಾರ್ನಿ ಜನರಲ್ ಕೆ ವೇಣುಗೋಪಾಲ್ ಅವರು ಹಲವು ದೇಶಗಳಲ್ಲಿ ನ್ಯಾಯಾಲಯ ಕಲಾಪಗಳ ನೇರ ವೀಕ್ಷಣೆ ಪದ್ಧತಿಯಿದೆ ಎಂದು ಹೇಳಿದ್ದರು.ಹಲವು ದೇಶದಲ್ಲಿ ಕೋರ್ಟ್ ಕಲಾಪ ನೇರ ಪ್ರಸಾರ ಇದ್ದರೂ ಭಾರತದ ಮಟ್ಟಿಗೆ ಈ ತೀರ್ಪು ಐತಿಹಾಸಿಕವಾಗಿದೆ.