ಕ್ರೇನ್​ ಕುಸಿತಕ್ಕೆ 6 ಕಾರ್ಮಿಕರು ಬಲಿ- ಕಲಬುರ್ಗಿಯಲ್ಲಿ ಹೃದಯವಿದ್ರಾವಕ ಘಟನೆ!

 

ಸೆಂಟ್ರಿಂಗ್ ಕೆಲಸ ಮಾಡುವಾಗ ಏಕಾಏಕಿ ಕ್ರೆನ್ ಕುಸಿದುಬಿದ್ದ ಪರಿಣಾಮ ಆರು ಜನ ಕಾರ್ಮಿಕರು ದುರ್ಮರಣಕ್ಕಿಡಾಗಿರುವ ಘಟನೆ ಕಲಬುರಗಿ‌ ಜಿಲ್ಲೆ ಸೇಡಂ ತಾಲೂಕಿನ ಕೋಡ್ಲಾದಲ್ಲಿ ನಡೆದಿದೆ. ಕೋಡ್ಲಾ ಗ್ರಾಮದ ಶ್ರೀ ಸಿಮೆಂಟ್ ಫ್ಯಾಕ್ಟರಿಯಲ್ಲಿ ಕಾಮಗಾರಿ ವೇಳೆ ಘಟನೆ ಸಂಭವಿಸಿದೆ.
ನಿನ್ನೆ ಸಂಜೆ 7 ಗಂಟೆ ವೇಳೆಗೆ 20 ಕ್ಕೂ ಹೆಚ್ಚು ಕಾರ್ಮಿಕರು ಕ್ರೇನ್ ಮೇಲೆ ಹತ್ತಿ ಸೆಂಟ್ರಿಂಗ್​ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕ್ರೇನ್ ಕುಸಿದು ಬಿದ್ದಿದೆ. ಪರಿಣಾಮ ಸ್ಥಳದಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಇನ್ನು ಉಳಿದ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೇ ಕಾರ್ಮಿಕರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

 

ಬಿಹಾರ್ ಮೂಲದ ತಬಾರಕ್ ಅಲಿ, ಬಿಪಿನ್ ಸಹನಿ, ಅಜಯ್, ಮಹ್ಮದ್ ಜುಬೇರ್, ಸುಧಾಕರ್ ಸಹನಿ,‌ ಖೊಕೋ‌ ಮೃತ ದುರ್ದೈವಿಗಳು. ಇನ್ನೊರ್ವ ಕಾರ್ಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಶ್ರೀ ಸಿಮೆಂಟ್ ಫ್ಯಾಕ್ಟರಿ ನಿರ್ಮಾಣ ಹಂತದಲ್ಲಿದ್ದು, ಮೇಲಿಂದ ಮೇಲಿಂದ ಇಂತಹ ಅವಘಡಗಳು ಸಂಭವಿಸುತ್ತಿದ್ದರು ಸಹ ಆಡಳಿತ ಮಂಡಳಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಕಾಮಗಾರಿ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳಕ್ಕೆ ಕಲಬುರ್ಗಿ ಎಸ್​ಪಿ ಶಶಿಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಕಂಪನಿ ಮಾಲೀಕ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.