ಮೃತ್ಯುರೂಪಿ ಲಾರಿಗೆ ನಾಲ್ವರು ಬಲಿ- ರಸ್ತೆ ಬದಿಯಲ್ಲಿ ನಿಂತಿದ್ದವರನ್ನೇ ಬಲಿ ಪಡೆದ ಜವರಾಯ!

 

ad

ರಸ್ತೆ ಬದಿ ನಿಂತಿದ್ದವರ ಮೇಲೆ ಯಮಧೂತನಂತೆ ಬಂದ ಲಾರಿ ಹರಿದ ಪರಿಣಾಮ ನಾಲ್ವರೂ ದುರ್ಮರಣಕ್ಕಿಡಾಗಿರುವ ಹೃದಯವಿದ್ರಾವಕ ಘಟನೆ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 216 ರ ಬಳಿ ಬೆಳಗ್ಗೆ ಎಂಟು ಗಂಟೆಗೆ ಘಟನೆ ನಡೆದಿದ್ದು, ಸಿಂದಗಿಯಿಂದ ಜೇವರ್ಗಿ ಕಡೆ ಬರುತ್ತಿದ್ದ ಲಾರಿ ರಸ್ತೆ ಬದಿ‌ ನಿಂತಿದ್ದವರ ಮೇಲೆ ಹರಿದಿದೆ.

ಲಾರಿ ಹರಿದ ಪರಿಣಾಮ, ಜೇರಟಗಿ ಗ್ರಾಮದ ಶ್ರೀಕಾಂತ್ ಬಡಿಗೇರ್ (25) ಮೋಹಿದ್ (18) ಸ್ಥಳದಲ್ಲೆ ಸಾವನ್ನಪ್ಪಿದ್ದರೇ ನಾಲ್ವರು ಗಂಭೀರ ಗಾಯಗೊಂಡಿದ್ದರು.. ಗಾಯಗೊಂಡ ನಾಲ್ವರಲ್ಲಿ ಪೀರ್‌ಸಾಬ್ ಎಂಬಾತನ ಎರಡು ಕಾಲುಗಳು ಕಟ್ ಆಗಿ ತೀವ್ರ ರಕ್ತಸ್ರಾವದಿಂದ‌ ನರಳಾಡುತ್ತಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪೀರ್‌ಸಾಬ್ ಮತ್ತು ಉತ್ತರ ಪ್ರದೇಶ ಮೂಲದ ಪಾನಿಪುರಿ ವ್ಯಾಪಾರಿ ಗೋಲು (18) ಜೇವರ್ಗಿ ತಾಲೂಕಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

 

ಇನ್ನೂ ಘಟನೆ ನಂತರ ಚಾಲಕ ಲಾರಿಯನ್ನ ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾನೆ. ವೇಗವಾಗಿ ಲಾರಿಯನ್ನ ಡ್ರೈವ್ ಮಾಡುತ್ತಿರುವುದು ಮತ್ತು ನಿದ್ರೆಯ‌ ಮಂಪರಿನಲ್ಲಿ ಲಾರಿ ಡ್ರೈವ್ ಮಾಡುತ್ತಿರುವುದು ದುರಂತಕ್ಕೆ‌ ಕಾರಣ ಎನ್ನಲಾಗಿದ್ದು, ಪರಾರಿಯಾಗಿರುವ ಲಾರಿ ಚಾಲಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ‌. ಇನ್ನು ಗಾಯಾಳಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.
ಘಟನೆಯನ್ನ ಖಂಡಿಸಿ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ 216 ರನ್ನ ಸುಮಾರು ಒಂದು ಗಂಟೆಗಳ ಕಾಲ ತಡೆದು ಪ್ರತಿಭಟನೆಯನ್ನ ನಡೆಸಿದ್ದು, ರಸ್ತೆ‌ ಮೇಲೆ ಹಂಪ್‌ಗಳು ಇರದಿರುವುದಕ್ಕೆ ಘಟನೆ ಸಂಭವಿಸಿದೆ ಅಂತಾ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಇನ್ನೂ ಪ್ರಕರಣವನ್ನ ದಾಖಲಿಸಿಕೊಂಡಿರುವ ನೇಲೋಗಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ…