ಮೊದಲ ಹಂತದ ಮತದಾನಕ್ಕೆ ದಿನಗಣನೆ! ಮತ್ತಷ್ಟು ವೇಗ ಪಡೆದುಕೊಂಡ ಪ್ರಚಾರ ಕಾರ್ಯ! ಹೈವೋಲ್ಟೇಜ್​ ಕ್ಷೇತ್ರಗಳಲ್ಲಿ ಬಿಗಿಭದ್ರತೆ!!

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಏಪ್ರಿಲ್​​ 18ರಂದು ಮತದಾನ ನಡೆಯಲಿದೆ. ಮತದಾನ ಆರಂಭಕ್ಕೆ 48 ಗಂಟೆಗೆ ಮುನ್ನ ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ. ಹೀಗಾಗಿ ನಾಳೆ ಸಂಜೆ ಅಭ್ಯರ್ಥಿಗಳು ಬಹಿರಂಗ ಪ್ರಚಾರಕ್ಕೆ ಅಂತ್ಯ ಹಾಡಬೇಕಿದೆ.
ಏಪ್ರಿಲ್​​ 17ರಂದು ಅಭ್ಯರ್ಥಿಗಳು ಕೇವಲ ಮನೆ ಮನೆ ಪ್ರಚಾರ ಮಾಡಲು ಅವಕಾಶ ಇರಲಿದೆ. ಹೀಗಾಗಿ ಮತದಾರರನ್ನು ಸೆಳೆಯಲು ಇಂದು ಮತ್ತು ನಾಳೆ ಕೊನೆಯ ಅವಕಾಶವಿದ್ದು, ಅಭ್ಯರ್ಥಿಗಳು ಮತಸೆಳೆಯುವ ಸರ್ವಪ್ರಯತ್ನ ಆರಂಭಿಸಿದ್ದಾರೆ.


ಬಹಿರಂಗ ಪ್ರಚಾರ ಕೊನೆಗೊಳ್ಳುವ ಮುನ್ನ ಕೊನೆಯ ಪ್ರಯತ್ನ ಎಂಬಂತೆ ಮತದಾರರನ್ನು ಸೆಳೆಯಲು ಎಲ್ಲೆಡೆ ಬಹಿರಂಗ ಪ್ರಚಾರ ಬಿರುಸುಗೊಂಡಿದ್ದು, ತಮ್ಮ ತಮ್ಮ ಅಭ್ಯರ್ಥಿಗಳ ಪರ ಪಕ್ಷದ ನಾಯಕರು, ಕಾರ್ಯಕರ್ತರು ಅಬ್ಬರದ ಪ್ರಚಾರ ಮುಂದುವರೆಸಿದ್ದಾರೆ. ಎಲ್ಲೆಡೆ ಸ್ಟಾರ್ ಖ್ಯಾತಿ ಪ್ರಚಾರಕರು ಪ್ರಚಾರದ ಕಣಕ್ಕಿಳಿದಿದ್ದು, ಸಭೆ, ರ್ಯಾಲಿ,ಬೈಕ್ ರ್ಯಾಲಿ ಮೂಲಕ ಜನರ ಮನಸ್ಸು ಗೆಲ್ಲುವ ಸರ್ಕಸ್ ಆರಂಭಿಸಿದ್ದಾರೆ.


ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ಹೈವೋಲ್ಟೇಜ್​ ಕ್ಷೇತ್ರಗಳೆಂದು ಪರಿಗಣಿಸಲ್ಪಟ್ಟ ಮಂಡ್ಯ, ತುಮಕೂರು, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್​, ಹಾಸನ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲೇ ಮತದಾನ ನಡೆಯಲಿರುವುದರಿಂದ ಪ್ರಚಾರ ಭರಾಟೆ ಎಲ್ಲೆ ಮೀರಿದೆ. ಒಟ್ಟಿನಲ್ಲಿ ಮೊದಲ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಮತದಾರ ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾನೆ.