ಹಲ್ಲೆ ಆರೋಪದಡಿ ಜೈಲು ಸೇರಿದ ದುನಿಯಾ ವಿಜಿ- ಕರಿಚಿರತೆಗೆ 14 ದಿನಗಳ ನ್ಯಾಯಾಂಗಬಂಧನ- ಅರ್ಜಿ ವಿಚಾರಣೆ ಸಪ್ಟೆಂಬರ್​ 26 ಕ್ಕೆ ಮುಂದೂಡಿಕೆ!

ಜಿಮ್​ ಟ್ರೇನರ್​​ ಮಾರುತಿಗೌಡ್ ಮೇಲೆ ಹಲ್ಲೆ ನಡೆಸಿ ನಿನ್ನೆ ರಾತ್ರಿ ವೇಳೆಗೆ ಜೈಲುಪಾಲಾದ ನಟ ದುನಿಯಾ ವಿಜಿಗೆ ಖೈದಿ ನಂಬರ್​ ಸಿಕ್ಕಿದೆ. ಹೌದು ದುನಿಯಾ ವಿಜಿಗೆ ವಿಚಾರಣಾಧೀನ ಖೈದಿ ನಂಬರ್ ನೀಡಲಾಗಿದ್ದು, ಜೈಲಿನಲ್ಲಿ ದುನಿಯಾ ವಿಜಿ ಒಂದು ರಾತ್ರಿ ಕಳೆದಿದ್ದಾರೆ.
ಮೊನ್ನೆ ತಡರಾತ್ರಿ ಬಂಧನಕ್ಕೊಳಗಾಗಿದ್ದ ದುನಿಯಾ ವಿಜಿಯನ್ನು ನಿನ್ನೆ ಸಂಜೆ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಿಧಿಸಿದ್ದರು.

ಬಳಿಕ ದುನಿಯಾ ವಿಜಿ ಸೇರಿದಂತೆ ಒಟ್ಟು ನಾಲ್ವರನ್ನು ಜೈಲಿಗೆ ಕರೆದೊಯ್ಯಲಾಗಿತ್ತು. ತಡರಾತ್ರಿ ದುನಿಯಾ ವಿಜಿ ಹಾಗೂ ಸಹಚರರಿಗೆ ವಿಚಾರಣಾಧೀನ ಖೈದಿ ನಂಬರ್ ನೀಡಲಾಗಿದೆ. ದುನಿಯಾ ವಿಜಿಗೆ 9035, ಪ್ರಸಾದ್​ಗೆ 9036, ಮಣಿಗೆ 9037- ಪ್ರಸಾದ್​ಗೆ 9038 ನಂಬರ್​​ ನೀಡಲಾಗಿದೆ.
ಇನ್ನು ವಿಚಾರಣಾಧೀನ ಖೈದಿಗಳ ಬ್ಯಾರಕ್​ನಲ್ಲಿ ರಾತ್ರಿ ಕಳೆದ ವಿಜಯ್, ರಾತ್ರಿ 1 ಗಂಟೆಯವರೆಗೂ ಸಹಚರರ ಜೊತೆ ಘಟನೆ ಬಗ್ಗೆ ಚರ್ಚಿಸುತ್ತಿದ್ದು, 1 ಗಂಟೆಗೆ ಮಲಗಿ ಬೆಳಗ್ಗೆ 3 ಗಂಟೆಗೆ ಎಚ್ಚರಗೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಟೆನ್ಸನ್ ತಡೆಯಲಾಗದೇ ಜೈಲಾಧಿಕಾರಿಗಳ ಬಳಿ ವಿಜಯ್ ಸಿಗರೇಟ್ ಕೇಳಿದ್ದಾರೆ. ಆದರೇ ಅಧಿಕಾರಿಗಳು ನೀಡಲು ನಿರಾಕರಿಸಿದ್ದಾರೆ.

ಇನ್ನು ಬೆಳಗ್ಗೆ 7 ಗಂಟೆಗೆ ಜೈಲಿನ ಮೆನುವಿನಂತೆ ದುನಿಯಾ ವಿಜಿಗೆ ಚಿತ್ರಾನ್ನ ಹಾಗೂ ಟೀ ವಿತರಿಸಿದ್ದಾರೆ. ಇನ್ನು ಕುತೂಹಲ ಮೂಡಿಸಿದ ದುನಿಯಾ ವಿಜಯ್ ಜಾಮೀನು ಅರ್ಜಿ ವಿಚಾರಣೆ 26 ಕ್ಕೆ ಮುಂದೂಡಿಕೆಯಾಗಿದ್ದು, ದುನಿಯಾ ವಿಜಯ್ ಜೈಲುವಾಸ ಇನ್ನಷ್ಟು ದಿನ ಮುಂದುವರಿಯಲಿದೆ. ದುನಿಯಾ ವಿಜಯ್ ಪರ ವಾದ ಮಂಡಿಸಿದ ವಕೀಲರು ಉದ್ದೇಶಪೂರ್ವಕವಾಗಿ ಜಾಮೀನುಸಿಗದಂತಹ ಸೆಕ್ಷನ್​ಗಳನ್ನ ಬಳಸಲಾಗಿದೆ. ಅಲ್ಲದೇ ಹಲ್ಲೆ ಮಾಡಲು ಯಾವುದೇ ಆಯುಧ ಬಳಸಲಾಗಿಲ್ಲ. ಇದು ಚಿಕ್ಕ ಜಗಳವಾಗಿದ್ದು, ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ವಾದಿಸಿದ್ದರು. ಆದರೇ 8 ನೇ ಎಸಿಎಂಎಂ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಸಪ್ಟೆಂಬರ್​ 26 ಕ್ಕೆ ಮುಂದೂಡಿದೆ.