ದೋಸ್ತಿಯಲ್ಲಿ ಡಿಶುಂ ಡಿಶುಂ !! ಮೈತ್ರಿ ಸರಕಾರ ಉರುಳಿಸಲಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ ? ಸಂಕಷ್ಟದಲ್ಲಿ ಸಿಎಂ ಎಚ್ ಡಿ ಕುಮಾರಸ್ವಾಮಿ !!

ಮೈತ್ರಿ ಸರಕಾರವನ್ನು ಉರುಳಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ಲ್ಯಾನ್ ಮಾಡಿದ್ದಾರೆಯೇ ? ಇಂತಹುದೊಂದು ಅನುಮಾನಗಳು ಇದೀಗ ದಟ್ಟವಾಗಲಾರಂಬಿಸಿದೆ. ಈ ಸರಕಾರ ಲೋಕಸಭಾ ಚುನಾವಣೆಯವರೆಗೆ ನಡೆದರೆ ಹೆಚ್ಚು ಎಂಬ ಧಾಟಿಯಲ್ಲಿ ಖುದ್ದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ಸೋತವರು ಮಂಡಿಸಿದ ಬಜೆಟ್ ಮುಂದುವರೆಸುವುದಿಲ್ಲ ಎಂದು ಹೇಳಿದ್ದಾರೆ. ಈ ಮಧ್ಯೆ ಭಿನ್ನಮತ ಇರೋದ್ರ ಬಗ್ಗೆ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಒಪ್ಪಿಕೊಂಡ್ರೆ ಒಂದಷ್ಟು ಶಾಸಕರು ಸಿದ್ದರಾಮಯ್ಯ ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಇದೀಗ ದೋಸ್ತಿ ಸರಕಾರದಲ್ಲಿ ಸಮರ ಪ್ರಾರಂಭವಾಗಿದೆ.

ad

ಮೈತ್ರಿ ಸರಕಾರವಾದ್ದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸದಾಗಿ ಬಜೆಟ್ ಮಂಡಿಸಿದೆ ಹಿಂದಿನ ಕಾಂಗ್ರೆಸ್ ಸರಕಾರದ ಬಜೆಟ್ ಮುಂದುವರೆಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಮಾಜಿ ಸಿಎಂ ಮಾತನ್ನು ಕ್ಯಾರೇ ಮಾಡದ ಎಚ್ ಡಿಕೆ ಹೊಸ ಬಜೆಟ್ ಮಂಡನೆಗೆ ಸಿದ್ದತಾ ಸಭೆಗಳನ್ನು ಶುರು ಮಾಡಿದ್ದಾರೆ. ಬಜೆಟ್ ಪೂರ್ವಭಾವಿ ಸಭೆಗಳು ಪ್ರಾರಂಭವಾಗುತ್ತಿದ್ದಂತೆ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯ ಸೇರಿಕೊಂಡ ಸಿದ್ದರಾಮಯ್ಯ ಅಲ್ಲೇ ತನ್ನ ಆಪ್ತ ಶಾಸಕರ ಸಭೆ ನಡೆಸಿದ್ದಾರೆ. ಬಜೆಟ್ ಮತ್ತು ರೈತರ ಸಾಲಮನ್ನ ಮಾಡುವ ಅಗತ್ಯ ಇಲ್ಲ ಎಂಬರ್ಥದಲ್ಲಿ ಸಿದ್ದರಾಮಯ್ಯ ಮಾತನಾಡಿರುವ ಆಡಿಯೋ ಬಿಡುಗಡೆ ಆಗುತ್ತಿದ್ದಂತೆ ದೋಸ್ತಿ ಸರಕಾರದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಬೇಟಿಯಾದ ಡಾ ಜಿ ಪರಮೇಶ್ವರ್, ನಿಗಮ ಮಂಡಳಿ ನೇಮಕಕ್ಕೆ ಅನುಮೋದನೆ ನೀಡಿ ಎಂದು ಕೇಳಿದ್ರೆ ಸಿದ್ದರಾಮಯ್ಯ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ.

ಇಂದು ಮಾತನಾಡಿದ ಡಿಸಿಎಂ ಪರಮೇಶ್ವರ್, ಮೈತ್ರಿ ಸರಕಾರದಲ್ಲಿ ಅಸಮಾದಾನ ಇರೋದು ಸಹಜ. ಹಲವು ವಿಚಾರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ನನಗೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯಗೆ ಅಸಮಾದಾನ ಇದೆ. ಸಿದ್ದರಾಮಯ್ಯ ಧರ್ಮಸ್ಥಳದಿಂದ ಬಂದ ತಕ್ಷಣ ಸಮನ್ವಯ ಸಮಿತಿ ಸಭೆ ನಡೆಸುತ್ತೇವೆ ಎಂದರು.ಇಂದು ರೈತರ ಸಾಲಮನ್ನ ಬಗ್ಗೆ ಸಹಕಾರಿ ಬ್ಯಾಂಕುಗಳ ಅಧ್ಯಕ್ಷರ ಸಭೆ ನಡೆಸಿದ ಎಚ್ ಡಿಕೆ, ಸಿದ್ದರಾಮಯ್ಯ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು. ಕೆಲವರು ಹಳೇ ಬಜೆಟ್ ಮುಂದುವರೆಸಬೇಕು ಎನ್ನುತ್ತಾರೆ. ಸೋತವರು ಮಂಡಿಸಿದ ಬಜೆಟ್ ಅನ್ನು ಹೇಗೆ ಮುಂದುವರೆಸಲಿ ಎಂದು ಎಚ್ ಡಿಕೆ ಪ್ರಶ್ನಿಸಿದ್ದಾರೆ. ಮುಂದುವರೆದು ಮಾತನಾಡಿದ ಎಚ್ ಡಿಕೆ, ಕೆಲವರು ಧರ್ಪ, ಆಹಂಕಾರದಿಂದ ಸರಕಾರ ನಡೆಸಿದ್ದರು. ನಾನು ಸ್ಮೂತ್ ಗೋಯಿಂಗ್ ಸಿಂ. ಹಾಗಂತ ನನ್ನನ್ನು ದುರುಪಯೋಗ ಮಾಡಬೇಡಿ ಎಂದರು.

ಈ ಮಧ್ಯೆ ಬೆಳಗಾವಿಯಲ್ಲಿ ಮಾತನಾಡಿದ ಸಚಿವ ರಮೇಶ್ ಜಾರಕೀಹೊಳಿಯರು ಸಿದ್ದರಾಮಯ್ಯರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ನಾವಿನ್ನೂ ಸಾಮನ್ಯ ಕನಿಷ್ಠ ಕಾರ್ಯಕ್ರಮದ ಸಮಿತಿ ಸಭೆಯನ್ನೇ ಮುಗಿಸಿಲ್ಲ. ಅಷ್ಟರಲ್ಲಿ ಬಜೆಟ್ ಮಂಡಿಸೋದು ಸರಿಯಲ್ಲ. ಸಿದ್ದರಾಮಯ್ಯ ಹೇಳಿದ್ದು ಸರಿ ಇದೆ ಎಂದು ಸಮಿತಿ ಅಧ್ಯಕ್ಷ ವೀರಪ್ಪ ಮೊಯಿಲಿ ಹೇಳಿದ್ದಾರೆ.