ಬಿಟಿವಿಗೆ ಗೋಯಂಕಾ ಅವಾರ್ಡ್ ಗರಿ !! ನಿರ್ಭೀತಿ-ನಿಷ್ಪಕ್ಷಪಾತ ಪತ್ರಿಕೋದ್ಯಮಕ್ಕೆ ಸಂದ ಗೌರವ!!

ರಾಮ್ ನಾಥ್ ಗೋಯಂಕಾ…… ಈ ಹೆಸರೇ ಪತ್ರಿಕೋದ್ಯೋಗಿಗಳಿಗೆ ರೋಮಾಂಚನ ಉಂಟು ಮಾಡುತ್ತದೆ. ಕೊಲೆಯೊಂದನ್ನು ಹೊರತುಪಡಿಸಿ ಭಾರತದ ದಂಡಸಂಹಿತೆಯ ಎಲ್ಲಾ ಆರೋಪಗಳು ನನ್ನ ಮೇಲಿವೆ ಎಂದು ಪತ್ರಕರ್ತ ರಾಮ್ ನಾಥ್ ಗೋಯಂಕಾ ಹೇಳುತ್ತಾರೆ. ಪತ್ರಕರ್ತನೊಬ್ಬ ರಾಜಕಾರಣಿಯ ಜೊತೆ ಅತೀ ಸಲುಗೆಯನ್ನು ಹೊಂದಿದ್ದರೆ ಆತನನ್ನು ತಕ್ಷಣ ಕೆಲಸದಿಂದ ತೆಗೆದುಹಾಕಬೇಕು ಎಂದೂ ಗೋಯಂಕಾ ಹೇಳುತ್ತಾರೆ. ಗೋಯಂಕಾ ಈ ಮಾತುಗಳು ಬಿಟಿವಿಗೆ ಹೆಚ್ಚು ಅನ್ವಯವಾಗುತ್ತದೆ.ಗೊಯಂಕಾ ಮಾತಿನಂತೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹಲವು ಸವಾಲುಗಳು, ಪ್ರಕರಣಗಳನ್ನು ಎದುರಿಸುತ್ತಲೇ ತನಿಖಾ ಪತ್ರಿಕೋದ್ಯಮ ನಡೆಸುತ್ತಾ, ಯಾವ ಪಕ್ಷ-ರಾಜಕಾರಣಿಯ ಅಡಿಯಾಳಾಗದೆ ನಿಷ್ಪಕ್ಷಪಾತ ಪತ್ರಿಕೋದ್ಯಮ ನಡೆಸುತ್ತಿರುವ ಬಿಟಿವಿಗೆ ಗೋಯಂಕಾ ಅವಾರ್ಡ್ ಲಭಿಸಿರುವುದು ಪತ್ರಿಕೋದ್ಯಮಕ್ಕೇ ಹೆಮ್ಮೆ.

ad

 

 

ಹೌದು… ನಿಷ್ಪಕ್ಷಪಾತ, ಪ್ರಾಮಾಣಿಕ, ತನಿಖಾ ಪತ್ರಿಕೋದ್ಯಮಕ್ಕೆ ಭಾಷ್ಯ ಬರೆದ ಸ್ವಾತಂತ್ರ್ಯ ಹೋರಾಟಗಾರ ರಾಮ್ ನಾಥ್ ಗೋಯಂಕಾ ಅವಾರ್ಡ್ ಬಿಟಿವಿಗೆ ದಕ್ಕಿದೆ. ಬಿಟಿವಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಿ ಎಂ ಕುಮಾರ್ ಇಂದು ನಡೆದ ಸರಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಾದರು.
ರಾಮ್ ನಾಥ್ ಗೋಯಂಕಾ ಚಾರಿಟೇಬಲ್ ಟ್ರಸ್ಟ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬಿಟಿವಿಯನ್ನು ತನಿಖಾ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸರಳ, ಸುಂದರ ಸಮಾರಂಭದಲ್ಲಿ ಜಸ್ಟಿಸ್ ಗೋಪಾಲಗೌಡ ಮತ್ತು ಜಸ್ಟಿಸ್ ಎನ್ ಸಂತೋಷ್ ಹೆಗ್ಡೆಯವರು ಬಿಟಿವಿಯ ವ್ಯವಸ್ಥಾಪಕ ನಿರ್ದೇಶಕ ಜಿ ಎಂ ಕುಮಾರ್ ರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಖುದ್ದು ರಾಮ್ ನಾಥ್ ಗೋಯಂಕಾರವರ ಮೊಮ್ಮಗ, ಗೊಯಂಕಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ಗೋಯಂಕಾರವರೇ ಬಿಟಿವಿ ಎಂಡಿ ಜಿ ಎಂ ಕುಮಾರ್ ರವರಿಗೆ ಶಾಲು ಹೊದೆಸಿ ಸನ್ಮಾನಿಸಿದರು.

 

ಬಿಟಿವಿ ಜೊತೆಗೆ ಸಂಯುಕ್ತ ಕರ್ನಾಟಕ ಪತ್ರಿಕೆ, ರಾಜ್ ನ್ಯೂಸ್ ನ ಹಮೀದ್ ಪಾಳ್ಯ, ಟಿವಿ9 ಸಿಇಒ ಅಬ್ದುಲ್ ಹಕೀಂಗೆ ಗೊಯಂಕಾ ಅವಾರ್ಡ್ ಲಭಿಸಿದೆ. ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಪ್ರಶಸ್ತಿ ವಿತರಿಸಿದರು.

ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಪತ್ರಿಕೆಯನ್ನು ಪ್ರಾರಂಭಿಸಿದ ರಾಮ್ ನಾಥ್ ಗೋಯಂಕಾ, ಸ್ವಾತಂತ್ರ್ಯ ನಂತರ ತುರ್ತು ಪರಿಸ್ಥಿತಿಯ ಸಂಧರ್ಭದಲ್ಲೂ ಸ್ವಾತಂತ್ರ್ಯ ಹೋರಾಟ ಮಾಡುತ್ತಾರೆ. ಬ್ರಿಟೀಷರಿಂದ ಭಾರತವನ್ನು ಮುಕ್ತಗೊಳಿಸುವ ಹೋರಾಟದಲ್ಲಿ ಯಶಸ್ವಿಯಾದ ಗೋಯಂಕಾ, ಸ್ವಾತಂತ್ರ್ಯ ನಂತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾಯ್ತು.

 

ವಿಪರ್ಯಾಸವೆಂದರೆ ರಾಮ್ ನಾಥ್ ಗೋಯಂಕಾರಂತವರಿಂದ ಪ್ರಾರಂಭವಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಇಂದೂ ನಿಂತಿಲ್ಲ. ಬಿಟಿವಿ ರಾಮ್ ನಾಥ್ ಗೋಯಂಕಾರ ಪರಂಪರೆಯನ್ನು ಮುಂದುವರೆಸುತ್ತಿದೆ. ಸಾಲು ಸಾಲು ಕೇಸುಗಳನ್ನು ಹಾಕಿದರೂ, ರಾಜಕಾರಣಿಗಳು ಬೆದರಿಕೆ ಒಡ್ಡಿದರೂ ಜಗ್ಗದೇ ಗೋಯಂಕಾ ಮಾದರಿ ಪತ್ರಿಕೋದ್ಯಮ ಮುಂದುವರೆಯಲಿದೆ.