ಹಾಸನಾಂಬೆಯ ದೀಪ ರಹಸ್ಯ- ಪವಾಡ ಬಯಲಿಗೆ ಚಿಂತಕರ ಆಗ್ರಹ- ಸ್ಥಳೀಯ ಭಕ್ತರ ಆಕ್ರೋಶ!

 

ವರ್ಷಕ್ಕೊಮ್ಮೆ ದರ್ಶನಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆಯ ದೀಪದ ಪವಾಡ ಇದೀಗ ಚರ್ಚೆಯ ವಸ್ತುವಾಗಿದೆ. ಭಾರತೀಯ ಜ್ಞಾನವಿಜ್ಞಾನ ಸಮಿತಿ ಕರೆದಿದ್ದ ಚಿಂತಕರ ಸಭೆಯಲ್ಲಿ ದೇವಿಯ ಪವಾಡಗಳ ಸತ್ಯಾಸತ್ಯತೆ ತಿಳಿಯಲು ಆರ್​​ಟಿಐ ಅಥವಾ ಹೈ ಕೋರ್ಟ್ ಮೊರೆ ಹೋಗೋ ನಿರ್ಧಾರಕ್ಕೆ ಚಿಂತಕರು ಬಂದಿದ್ದಾರೆ.
ಆದರೇ ಹಾಸನಾಂಬೆ ತಲೆತಲಾಂತರದಿಂದ ಸ್ಥಳೀಯರ ಹಾಗೂ ರಾಜ್ಯದ ನಾನಾಭಾಗದ ಜನರ ಶೃದ್ಧೆಯ ಕೇಂದ್ರವಾಗಿದೆ. ಅಲ್ಲದೇ ಜನರಿಗೆ ಹಾಸನಾಂಬೆಯ ಕುರಿತು ಅಪಾರ ಪ್ರಮಾಣದ ಗೌರವವಿದೆ. ಹೀಗಾಗಿ ಪವಾಡ ಬಯಲಿಗೆ ಚಿಂತಕರು ಪ್ರಯತ್ನಿಸುತ್ತಿರೋದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.

ಪ್ರತಿ ದೀಪಾವಳಿ ಸಂದರ್ಭದಲ್ಲಿ ಹಾಸನಾಂಬೆ ದೇಗುಲದ ಬಾಗಿಲು ತೆರೆದು ನಿರ್ದಿಷ್ಟ ದಿನಗಳವರೆಗೆ ದರ್ಶನ ನೀಡಲಾಗುತ್ತದೆ. ಕಾರ್ತಿಕ ಮಾಸದ ಮೊದಲ ಗುರುವಾರ ಬಾಗಿಲು ತೆರೆದು ಪಾಡ್ಯದ ದಿನ ಮುಚ್ಚಲಾಗುತ್ತೆ. ಬಾಗಿಲು ಮುಚ್ಚುವ ವೇಳೆ ಹಚ್ಚಿದ ಹಣತೆ ಹಾಗೇ ಬೆಳಗುತ್ತಿರುತ್ತದೆ. ಮುಡಿಸಿದ ಹೂ ಬಾಡುವುದಿಲ್ಲ. ದೇವಿಯ ಮುಂದಿಟ್ಟ ನೈವೇದ್ಯ ತಾಜಾ ರೀತಿಯಲ್ಲೇ ಇರುತ್ತೆ ಎನ್ನುವ ಪವಾಡ ಇದೆ. ಇದನ್ನು ತಿಳಿಯಲು ಇದೀಗ ಪ್ರಗತಿಪರರು ಮುಂದಾಗಿದ್ದಾರೆ. ಈ ಸಲ ನವೆಂಬರ್ 1 ರಿಂದ 9 ರವರಗೆ ಮಾತ್ರ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ.