ಧರಮ್ ಸಿಂಗ್ ಸಾವಿಗೆ ಎಚ್ ಡಿ ಕುಮಾರಸ್ವಾಮಿ ಕಾರಣ !! ವಿಶ್ವಾಸದ್ರೋಹವೇ ಎಚ್ ಡಿಕೆ ರಕ್ತದ ಗುಣ !! ಬಿಎಸ್ ವೈ ವಾಗ್ದಾಳಿ !!

ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್ ಸಾವಿಗೆ ಎಚ್ ಡಿ ಕುಮಾರಸ್ವಾಮಿಯೇ ಕಾರಣ ಎಂದು ವಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ಹೇಳುತ್ತಿದ್ದಂತೆ ವಿಧಾನಸಭೆ ಇಂದು ಗದ್ದಲದ ಗೂಡಾಗಿತ್ತು. ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತಿನುದ್ದಕ್ಕೂ ವಿಪಕ್ಷ ನಾಯಕ ಯಡಿಯೂರಪ್ಪನವರ ವಿರುದ್ದ ಟೀಕೆ ಮಾಡಿದರು. ಅದರಲ್ಲೂ
ಕುಮಾರಸ್ವಾಮಿ ಅವರಲ್ಲಿ ನಂಬಿಕೆ ದ್ರೋಹ, ವಿಶ್ವಾಸದ್ರೋಹ ರಕ್ತಗತವಾಗಿದೆ ಎಂದು ಬಿ.ಎಸ್.ವೈ ಬಳಸಿದ ಪದ ಸದನದಲ್ಲಿಂದು ಗದ್ದಲಕ್ಕೆ ಎಡೆ ಮಾಡಿಕೊಟ್ಟಿತು. ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ವಿಧಾನಸಭೆಯಲ್ಲಿ ಇಂದು ಉತ್ತರ ನೀಡಿದರು. ಈ ವೇಳೆ, ಹಿಂದೆ ಬಿಜೆಪಿ ಜೊತೆ ಮೈತ್ರಿ ಸರಕಾರ ನಡೆಸಿದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಪ್ರಸ್ತಾಪಿಸುತ್ತಲೇ ವಿಪಕ್ಷ ನಾಯಕ ಯಡಿಯೂರಪ್ಪವರಿಗೆ ಎದುರೇಟು ನೀಡುತ್ತಾ ಸಾಗಿದರು. ಕುಮಾರಸ್ವಾಮಿ ಉತ್ತರ ನೀಡಿದ ನಂತರ ಎದ್ದು ನಿಂತ ಯಡಿಯೂರಪ್ಪ, ಕುಮಾರಸ್ವಾಮಿ ಅವರಿಗೆ ವಿಶ್ವಾಸದ್ರೋಹ, ನಂಬಿಕೆ ದ್ರೋಹ ರಕ್ತಗತವಾಗಿದೆ. ಮೊದಲಿನಿಂದಲೂ ಅದನ್ನೇ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಅಧಿಕಾರ ಸ್ಥಾನಮಾನ ಕೊಟ್ಟ ನಮಗೂ ದ್ರೋಹ ಮಾಡಿದರು. ಧರ್ಮಸಿಂಗ್ ರವರಿಗೂ ಮೋಸ ಮಾಡಿದರು ಎಂದು ಹೇಳಿದ್ದು, ಸದನದಲ್ಲಿ ಕಾವೇರಿದ ವಾತಾವರಣಕ್ಕೆ ಕಾರಣವಾಯಿತು. ಬಿ.ಎಸ್.ವೈ ಮಾತಿಗೆ ಆಡಳಿತ ಪಕ್ಷದ ಕಡೆಯಿಂದ ತೀವ್ರ ಪ್ರತಿರೋಧ ಎದುರಾಯಿತು.
ವಿರೋಧ ಪಕ್ಷದ ಸದಸ್ಯರು ಸಹ ತಮ್ಮ ನಾಯಕರ ಬೆಂಬಲಕ್ಕೆ ನಿಂತರು.ಇದರಿಂದ ಸದನದಲ್ಲಿ ಗದ್ದಲ ಮತ್ತಷ್ಟು ಹೆಚ್ಚಾಯಿತು.

ಈ ಹಂತದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ನಡುವೆ ನೇರವಾಗಿ ಮಾತಿನ ಚಕಮಕಿ ನಡೆಯಿತು. ಎಲುಬಿಲ್ಲದ ನಾಲಗೆಯಲ್ಲಿ ಏನನ್ನೋ ಮಾತನಾಡುತ್ತಾರೆ ಎಂದು ಹೆಚ್.ಡಿ.ಕೆ ಆಕ್ರೋಶ ವ್ಯಕ್ತಪಡಿಸಿದರು. ಹೆಚ್.ಡಿ.ಕೆ ವಿರುದ್ದ ತಿರುಗೇಟು ನೀಡಿದ ಬಿ.ಎಸ್.ವೈ ನಾನು ಹೇಳಿದ್ದು ಸತ್ಯವಿದೆ. ಎಲುಬಿಲ್ಲದ ನಾಲಿಗೆ ನಿಮ್ಮದು. ನಮ್ಮದಲ್ಲ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರು, ಈ ಹಿಂದೆ ತಾವು ಸರ್ಕಾರ ರಚಿಸಿದ್ದಾಗ ಮಾಡಿಕೊಂಡಿದ್ದ ಒಪ್ಪಂದಗಳು, ಆಡಿದ ಮಾತಿಗೆ ತಪ್ಪಿದ್ದು ಎಲ್ಲವನ್ನೂ ಬಿಚ್ಚಿಟ್ಟು, ಒಬ್ಬರ ವಿರುದ್ಧ ಒಬ್ಬರು ಆರೋಪ ಪ್ರತ್ಯಾರೋಪಗಳ ಸುರಿಮಳೆಗೆರೆದರು.
20 ತಿಂಗಳು ಮುಖ್ಯಮಂತ್ರಿಯಾಗಿ ನಂತರ ಅಧಿಕಾರ ಹಸ್ತಾಂತರ ಮಾಡದೆ ದ್ರೋಹ ಮಾಡಿದ್ದು ನೀವು ಎಂದು ಯಡಿಯೂರಪ್ಪ ಹರಿಹಾಯ್ದರು. ನೀವು ಏನು ಮಾಡಿದ್ದೀರಿ, ಅಧಿಕಾರಕ್ಕೆ ಏನೆಲ್ಲಾ ಮಾಡಿದ್ದೀರಿ, ನನಗೆ ಏನೆಲ್ಲಾ ತೊಂದರೆ ಕೊಟ್ಟಿದ್ದೀರೀ, ಎಲ್ಲವೂ ಗೊತ್ತಿದೆ. ನಾನು ಮನಸ್ಸು ಮಾಡಿದ್ದರೆ ನಿಮ್ಮ ಹುಳುಕನ್ನೆಲ್ಲಾ ಬಿಚ್ಚಿಡಬಹುದಿತ್ತು. ಇತಿಮಿತಿಯಲ್ಲಿ ಮಾತನಾಡಿ ಎಂದು ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇದೇ ವೇಳೆ ಮದ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್, ಇಬ್ಬರನ್ನೂ ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಜವಾಬ್ದಾರಿ ಸ್ಥಾನದಲ್ಲಿರುವವರು ಸರಿಯಾದ ಭಾಷೆ ಬಳಸುವುದು ಒಳ್ಳೆಯದು. ಉದ್ವೇಗ ಬೇಡ, ದಯಮಾಡಿ ಉದ್ವೇಗಕ್ಕೆ ಒಳಗಾಗದೆ ಮಾತನಾಡಿ. ನೀವು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ರಾಜ್ಯದಲ್ಲಿ ನಿಮ್ಮದೆ ಆದ ಒಂದು ಪ್ರಮುಖ ಸ್ಥಾನ ಇದೆ. ನಿಮ್ಮನ್ನು ಹಗುರವಾಗಿ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಬಿ.ಎಸ್.ವೈ ಗೆ ವಿನಂತಿ ಮಾಡಿದರು. ಹಾಗೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹ ನೋವು, ಅಪಮಾನ ಇವುಗಳನ್ನು ಅನುಭವಿಸಿ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೂ ನೋವಾಗುವುದು ಬೇಡ ಕರ್ನಾಟಕ ವಿಧಾನಸಭೆ ಮಾದರಿ ವಿಧಾನಸಭೆಯಾಗಬೇಕು. ವಿರೋಧ ಪಕ್ಷದ ನಾಯಕರು ಹಾಗೂ ಸಭಾಧ್ಯಕ್ಷರು ಎದ್ದು ನಿಂತಾಗ ಬೇರೆ ಸದಸ್ಯರು ಗದ್ದಲಕ್ಕೆ ಕಾರಣವಾಗುವಂತೆ ಮಾತನಾಡುವುದು ಬೇಡ. ಅವರನ್ನು ಸಮರ್ಥಸಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿ ಗದ್ದಲಕ್ಕೆ ತೆರೆ ಎಳೆಯುವ ಪ್ಸಯತ್ನ ನಡೆಸಿದರು.

ಸಭಾಧ್ಯಕ್ಷರ ಮಾತಿನ ನಂತರ ಮತ್ತೆ ಎದ್ದು ನಿಂತ ಮುಖ್ಯಮಂತ್ರಿ ಕುಮಾರಸ್ವಾಮಿ, ಯಡಿಯೂರಪ್ಪ ಪದೇ ಪದೇ ಈ ರೀತಿ ಮಾತನಾಡುತ್ತಾರೆ. ಸದನದಲ್ಲಿ  ಧರ್ಮಸಿಂಗ್ ಬಗ್ಗೆ ಎರಡನೇ ಬಾರಿ ಮಾತನಾಡಿದ್ದಾರೆ. ಅದನ್ನು ಸರಿಪಡಿಸಿ ಎಂದಾಗ ಸಭಾಧ್ಯಕ್ಷರು ಆ ಪದವನ್ನು ತಡೆ ಹಿಡಿದಿದ್ದಾಗಿ ಹೇಳಿ ಮಾತನ್ನು ಮುಂದುವರೆಸುವಂತೆ ಯಡಿಯೂರಪ್ಪನವರಿಗೆ ಸೂಚಿಸಿದರು. ನಂತರ ಬಜೆಟ್ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಎಲ್ಲವನ್ನೂ ಮಾತನಾಡುವುದಾಗಿ ಹೇಳಿ ಬಿ.ಎಸ್.ವೈ ಕುಳಿತರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಸದನದಲ್ಲಿ ಅಂಗೀಕರಿಸಲಾಯಿತು.