ನಾಳೆ ಇಂಡಿಯಾ-ಪಾಕ್​ ಹೈವೋಲ್ಟೇಜ್​ ಮ್ಯಾಚ್​​! ಕ್ರಿಕೆಟ್​ ಪ್ರೇಮಿಗಳ ಮೇಲೆ ಕರುಣೆ ತೋರ್ತಾನಾ ವರುಣ?!

ನಾಳೆ ಇಡೀ ಕ್ರಿಕೆಟ್ ವಿಶ್ವವೇ ಎದುರು ನೋಡುತ್ತಿರುವ ಹೈ ವೋಲ್ಟೇಜ್ ಮ್ಯಾಚ್. ನಾಳಿನ ಪಂದ್ಯದಲ್ಲಿ ಬದ್ದ ವೈರಿಗಳಾದ ಭಾರತ ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಇದುವರೆಗೂ ವಿಶ್ವಕಪ್ ನಲ್ಲಿ ಆಡಿದ ಪಂದ್ಯಗಳಲ್ಲಿ ಪಾಕಿಸ್ತಾನದ ಎದುರು ಸೋಲದ ಟೀಮ್ ಇಂಡಿಯಾ ನಾಳೆಯ ಪಂದ್ಯದಲ್ಲಿ ಗೆಲ್ಲುವ ಫೇವರೆಟ್ ತಂಡವಾಗಿದ್ದು, ಪಂದ್ಯದ ಭವಿಷ್ಯ ವರುಣ ದೇವನ ಕೃಪೆ ಮೇಲೆ ನಿಂತಿದೆ.

ad


ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್​ನಲ್ಲಿ ಇದುವರೆಗೂ ಹಲವು ಪಂದ್ಯಗಳು ಮಳೆಗೆ ಆಹುತಿಯಾಗಿದೆ. ಈಗಲೂ ಹವಾಮಾನ ವೈಪರಿತ್ಯ ಮುಂದುವರೆದಿದ್ದು ಓಲ್ಡ್ ಟ್ರಾಪರ್ಡ್ ನಲ್ಲಿ ನಡೆಯುವ ನಾಳಿನ ಪಂದ್ಯಕ್ಕೆ ಮಳೆ ಭೀತಿ ಇರುವುದು ಕ್ರಿಕೆಟ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.


ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಭಾರತದ ಜಯಕ್ಕೆ ಕಾರಣವಾಗಿದ್ದ ಶಿಖರ್ ಧವನ್ ಕೈ ಬೆರಳಿಗೆ ಗಾಯ ಮಾಡಿಕೊಂಡು ನಾಳೆಯ ಪಂದ್ಯ ಕ್ಕೆ ಲಭ್ಯವಿಲ್ಲದೇ ಇರೋದರಿಂದ ಕನ್ನಡಿಗ ಕೆ ಎಲ್‌ರಾಹುಲ್ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ.


ಇನ್ನುಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ ನಾಲ್ಕನೆ ಕ್ರಮಾಂಕಕ್ಕೆ ದಿನೇಶ್ ಕಾರ್ತಿಕ್ ಅಥವಾ ವಿಜಯಶಂಕರ್ ಆಯ್ಕೆಯಾಗುವ ಸಾಧ್ಯತೆ ಇದೆ. ಇನ್ನೂಳಿದಂತೆ ಬೌಲಿಂಗ್ ವಿಭಾಗ ‌ಸ್ಥಿರ ಪ್ರದರ್ಶನ ನೀಡುತ್ತಿದ್ದು ಇದೇ ಕಾಂಬಿನೇಷನ್‌ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ.


ಇನ್ನೊಂದೆಡೆ ಭಾರತದ ವಿರುದ್ದ ವಿಶ್ವಕಪ್ ನಲ್ಲಿ ಗೆಲುವೆ ಕಾಣದ ಕಳಪೆ ದಾಖಲೆ ಹೊಂದಿರುವ ಪಾಕಿಸ್ತಾನಕ್ಕೆ ತಂಡದ ಅಸ್ಥಿರ ಪ್ರದರ್ಶನವೆ ಚಿಂತೆಯಾಗಿದೆ. ಅತಿಥೇಯ ಇಂಗ್ಲೆಂಡ್ ತಂಡವನ್ನ ಮಣಿಸುವ ಮೂಲಕ ಭರ್ಜರಿ ಪ್ರದರ್ಶನ ನೀಡಿದ್ದ ಪಾಕಿಸ್ತಾನ ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಸೋಲುವ ಮೂಲಕ ಮತ್ತೆ ತನ್ನ ಅಸ್ಥಿರ ಆಟ‌ಮುಂದುವರೆಸಿದೆ.

ಆರಂಭಿಕ ಫಖರ್ ಜಮಾನ್ ಕಳಪೆ ಫಾರ್ಮ್ ತಂಡವನ್ನ ಬಹುವಾಗಿ ಕಾಡ್ತಾ ಇದ್ರೆ, ವೇಗಿಗಳಾದ ವಹಾಬ್ ರಿಯಾಜ್ ಹಾಗೂ ಶಾಹಿನ್‌ಅಫ್ರೀದಿ ಅಸ್ಥಿರ ಫಾರ್ಮ್ ತಂಡದ ಚಿಂತೆಗೆ ಕಾರಣವಾಗಿದೆ. ಕಳೆದ ಪಂದ್ಯದಲ್ಲಿ ಐದು ವಿಕೆಟ್ ಪಡೆದ ಮೊಹಮ್ಮದ್ ಅಮೀರ್ ನಾಳಿನ‌ಪಂದ್ಯದಲ್ಲಿ ಪಾಕ್ ನ ಪ್ರಮುಖ ಆಸ್ತ್ರ.


ಇಂಡೋ ಪಾಕ್ ಪಂದ್ಯ ಎಂದರೆ ಅಲ್ಲಿ ಮನರಂಜನೆಗೇನು ಕಡಿಮೆ ಇರಲ್ಲ. ಆದರೆ ಇಂಗ್ಲೆಂಡ್‌ ನಲ್ಲಿ ವರುಣದೇವ ಅಬ್ಬರಿಸುತ್ತಿದ್ದು ನಾಳಿನ ಈ ಹೈ ವೋಲ್ಟೇಜ್ ಪಂದ್ಯಕ್ಕೂ ಅಡೆತಡೆ ಉಂಟಾಗುವ ಸಾಧ್ಯತೆ ಇದೆ. ಒಂದು ವೇಳೆ ಮಳೆ ಇಲ್ಲದೆ ಹೋದರೆ ನಾಳಿನ ಪಂದ್ಯದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ಸಿಗುವುದು ಗ್ಯಾರಂಟಿ.