ಮುನಿ ತರುಣಸಾಗರ್ ಜಿನೈಕ್ಯ- ಕಂಬನಿ ಮಿಡಿದ ಲಕ್ಷಾಂತರ ಭಕ್ತರು!

ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಸಿದ್ಧ ಜೈನ ಮುನಿ ಶ್ರೀತರುಣಸಾಗರ್​​ ಜಿನೈಕ್ಯರಾಗಿದ್ದಾರೆ. ಜಾಂಡೀಸ್​ನಿಂದ ಬಳಲುತ್ತಿದ್ದ ಅವರಿಗೆ 51 ವರ್ಷ ವಯಸ್ಸಾಗಿತ್ತು. ದೆಹಲಿಯ ಕೃಷ್ಣನಗರದಲ್ಲಿರುವ ರಾಧಪುರಿ ಜೈನದೇವಾಲಯದಲ್ಲಿ ಶ್ರೀತರುಣ ಸಾಗರ ಇಹಲೋಕ ತ್ಯಜಿಸಿದ್ದಾರೆ.
ಕಳೆದ ಕೆಲದಿನಗಳಿಂದ ಜಾಂಡೀಸ್​ನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಕೆಲ ದಿನದ ಬಳಿಕ ಅವರು ಔಷಧ ಹಾಗೂ ಆಹಾರ ಸೇವಿಸಲು ನಿರಾಕರಿಸಿ ವ್ರತದಲ್ಲಿದ್ದರು. ಬಳಿಕ ಅವರ ಇಚ್ಛೆಯಂತೆ ಅವರನ್ನು ದೆಹಲಿಯ ಜೈನಮಂದಿರಕ್ಕೆ ಕರೆತರಲಾಗಿತ್ತು.

ಇನ್ನು ತರುಣಸಾಗರ್ ನಿಧನಕ್ಕೆದೇಶದಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದಾರೆ. ದೇಶಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿದ್ದ ತರುಣಮುನಿಸಾಗರ್, ಮಧ್ಯಪ್ರದೇಶದ ದಾಹೋಹ್ ಜಿಲ್ಲೆಯಲ್ಲಿ 1967 ರಲ್ಲಿ ಜನಿಸಿದ್ದರು. 1981 ರ ಮಾರ್ಚ್ 8 ರಂದು ಕುಟುಂಬ ತ್ಯಜಿಸಿ ಹೊರಬಂದ ಅವರು ಸನ್ಯಾಸ ಸ್ವೀಕರಿಸಿದ್ದರು. ಅಲ್ಲದೇ ದಿಗಂಬರ ಪಂಥದ ಅನುಯಾಯಿಗಳಾಗಿದ್ದರು. ಇದೀಗ ಗಣ್ಯರ ಅಂತಿಮ ದರ್ಶನದ ಬಳಿಕ ಅವರ ಅಂತ್ಯಸಂಸ್ಕಾರ ಉತ್ತರ ಪ್ರದೇಶದ ಮುರಾದ್ ನಗರದ ತರುಣಸಾಗರಂನಲ್ಲಿ ಜೈನ್ ಸಂಪ್ರದಾಯದ ಪ್ರಕಾರ ನಡೆಯಲಿದೆ.