“ಜೋಡೆತ್ತು” ಸಿನಿಮಾ ಟೈಟಲ್​ ಫಿಕ್ಸ್​​! ತೆರೆ ಮೇಲೆ ಅಬ್ಬರಿಸಲಿದ್ದಾರೆ ದರ್ಶನ್​​-ಯಶ್​​?!

2019 ರ ಲೋಕಸಭೆ ಚುನಾವಣೆಯಲ್ಲಿ ರಾಜಕಾರಣಕ್ಕಿಂತ ಹೆಚ್ಚು ಸುದ್ದಿಯಾಗಿದ್ದು, ಜೋಡೆತ್ತು ಎನ್ನುವ ಪದ. ಮಕ್ಕಳಿಂದ ಆರಂಭವಾಗಿ ಮುದುಕರವರೆಗೂ, ಹಳ್ಳಿಯಿಂದ ಆರಂಭವಾಗಿ ವಿಧಾನಸೌಧದ ಅಂಗಳದವರೆಗೂ ಕೇಳಿಬಂದ ಶಬ್ದ ಜೋಡೆತ್ತು. ಇದೀಗ ಈ ಶಬ್ದ ಸಿನಿಮಾ ಟೈಟಲ್​ ಆಗಿದ್ದು, ಸಧ್ಯದಲ್ಲೇ ಬೆಳ್ಳಿತೆರೆ ಮೇಲೂ ಬರಲಿದೆ.

ad


ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ದಿ.ನಟ ಅಂಬರೀಶ್​ ಪತ್ನಿ ಸುಮಲತಾ ಪರ ಪ್ರಚಾರಕ್ಕೆ ನಿಂತಿದ್ದ ಲಾಜೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್​​ ಯಶ್​ ನಾವು ಜೋಡೆತ್ತುಗಳು ಎಂದಿದ್ದರು. ಅಂದಿನಿಂತ ರಾಜಕೀಯದಲ್ಲಿ ಎಲ್ಲಿ ನೋಡಿದರಲ್ಲಿ ಜೋಡೆತ್ತುಗಳ ವಿಚಾರವೇ ಚರ್ಚೆಯಾಗತೊಡಗಿತು.


ಹಲವಾರು ಬಾರಿ ರಾಜಕೀಯ ನಾಯಕರು ಟೀಕೆ,ಆರೋಪ,ಪ್ರತ್ಯಾರೋಪಗಳಲ್ಲೂ ಈ ಶಬ್ದ ಸಾಕಷ್ಟು ಸಲ ಬಳಕೆಯಾಗಿ ಕರ್ನಾಟಕದಾದ್ಯಂತ ಮನೆ ಮನೆಗೂ ಈ ಶಬ್ದ ಚಿರಪರಿಚಿತವಾಗಿತ್ತು. ಅಷ್ಟೇ ಅಲ್ಲ ಚಲನಚಿತ್ರ ವಾಣಿಜ್ಯಮಂಡಳಿಯಲ್ಲಿ ಈ ಟೈಟಲ್​ಗಾಗಿ ಪೈಪೋಟಿ ಆರಂಭವಾಗಿತ್ತು.

ಇದೀಗ ಮೆಜೆಸ್ಟಿಕ್​ ನಿರ್ಮಾಪಕ ಎಂ.ಜಿ.ರಾಮಮೂರ್ತಿ ಈ ಟೈಟಲ್​​ ಪಡೆದುಕೊಂಡಿದ್ದು, ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮೆಜೆಸ್ಟಿಕ್​ ಚಿತ್ರದ ಮೂಲಕ ದರ್ಶನ್​ ರಂತಹ ಸ್ಟಾರ್​ನ್ನು ಸ್ಯಾಂಡಲವುಡ್​ಗೆ ನೀಡಿದ ಎಂ.ಜಿ.ರಾಮಮೂರ್ತಿ ಖ್ಯಾತ ನಿರ್ಮಾಪಕರು. ದರ್ಶನ ಕೂಡ ಇವರ ಬಗ್ಗೆ ವಿಶೇಷ ಗೌರವ ಹೊಂದಿದ್ದಾರೆ.


ಮತ್ತೊಮ್ಮೆ ದರ್ಶನ್ ಜೊತೆ ಸಿನಿಮಾ ಮಾಡಲು ಮುಂದಾಗಿರುವ ಎಂ.ಜಿ.ರಾಮಮೂರ್ತಿ, ಈಗಾಗಲೇ ದರ್ಶನ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ದರ್ಶನ ಯೋಚಿಸಲು ಕಾಲಾವಕಾಶ ಕೇಳಿದ್ದು, ರಾಕಿಂಗ್ ಸ್ಟಾರ್ ಯಶ್​ ಗೂ ಎಂ.ಜಿ.ರಾಮಮೂರ್ತಿ ಆಫರ್ ನೀಡಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಜೋಡೆತ್ತು ಎಂಬ ಶಬ್ದ ಕೇಳುವುದು ಮಾತ್ರವಲ್ಲ, ಚಿತ್ರವಾಗಿ ನೋಡುವ ಅವಕಾಶವೂ ಲಭ್ಯವಾಗುವ ದಿನ ದೂರವಿಲ್ಲ.