ಸಚಿವರ ಪುತ್ರನಿಂದ ಭೂಕಬಳಿಕೆ- ಕಣ್ಮುಚ್ಚಿ ಕುಳಿತ ಜಿಲ್ಲಾಢಳಿತ

 

ಸಚಿವ ವೆಂಕಟರಾವ್ ನಾಡಗೌಡ ಪುತ್ರ ಪಾಕಿಸ್ತಾನ ನಿವಾಸಿಯೊಬ್ಬರ ಆಸ್ತಿಯನ್ನ ಖರೀದಿ ಮಾಡಿದ್ದು ವಿವಾದಕ್ಕೆ ಸಿಲುಕಿದ್ದಾರೆ. ಬಹುಕೋಟಿ ಬೆಲೆಯ ಜಮೀನನ್ನ ಅಕ್ರಮವಾಗಿ ಕಬಳಿಕೆ ಮಾಡಿದ್ದು, ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದರೂ ರಾಯಚೂರು ಜಿಲ್ಲಾಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಚಿವ ವೆಂಕಟರಾವ್ ನಾಡಗೌಡರ ಪುತ್ರ ಅಭಿಷೇಕ್ ನಾಡಗೌಡ ಸೇರಿದಂತೆ ನಾಲ್ವರು ಪ್ರಭಾವಿಗಳು ರಾಯಚೂರು ಸೀಮಾಂತರದ 84 ಎಕರೆ ಇನಾಂ ಜಮೀನನ್ನ ಲೂಟಿ ಮಾಡಿದ್ದಾರೆ. ರಾಯಚೂರು ಸೀಮಾಂತರದ ಸರ್ವೇ ನಂಬರ್ 1362, 1359/1 ಹಾಗೂ 1356/2ರಲ್ಲಿನ ಖಾಜಿ ಮೊಹಮ್ಮದ್ ಅಬ್ದುಲ್ ರಸೂಲ್ ಸಿದ್ದಿಕಿ ಎಂಬುವವರಿಗೆ ಸೇರಿದ ಒಟ್ಟು 84 ಎಕರೆ ಜಮೀನು ಇತ್ತು. ಅವರು ದೇಶ ವಿಭಜನೆಯ ಬಳಿಕ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದಾರೆ. ಆಗ ಸರ್ಕಾರದ ವಶವಾಗಬೇಕಿದ್ದ ಭೂಮಿಯನ್ನು ಪ್ರಭಾವಿಗಳ ಜೊತೆ ಶಾಮೀಲಾದ ಅಧಿಕಾರಿಗಳು ಖಾಸಗಿ ಆಸ್ತಿಯನ್ನಾಗಿ ಮಾಡಿದ್ದಾರೆ. ಇದ್ರಲ್ಲಿ ಸಚಿವ ವೆಂಕಟರಾವ್ ನಾಡಗೌಡ ಪುತ್ರ ಅಭಿಷೇಕ್ ನಾಡಗೌಡ 21 ಎಕರೆ ಜಮೀನು ಕಬಳಿಕೆ ಮಾಡಿದ್ದಾರೆ. ಉಳಿದಂತೆ ಬಿಜೆಪಿ ಮುಖಂಡ ಕಡಗೋಲ ಆಂಜನೇಯ, ಕಾಂಗ್ರೆಸ್ ಮುಖಂಡರಾದ ಶಿವಾನಂದ ಚುಕ್ಕಿ, ಉದಯಕುಮಾರ್ ಹಾಗೂ ಬಸವರಾಜ ವಕೀಲ್ ಎಂಬುವವರು ಜಮೀನು ಕಬಳಿಕೆ ಮಾಡಿದ್ದಾರೆ.

ಇನ್ನು ಕಬಳಿಕೆ ಆಗಿರುವ ಜಮೀನು ವಶಕ್ಕೆ ಪಡೆಯುವಂತೆ ರಾಯಚೂರು ಜಿಲ್ಲಾಧಿಕಾರಿಗಳಿಗೆ ಕಲಬುರಗಿ ಪ್ರಾದೇಶಿಕ ಆಯುಕ್ತರ ಆದೇಶವಿದ್ದರೂ ಕಿಮ್ಮತ್ತಿಲ್ಲದಂತಾಗಿದೆ. ಆರು ತಿಂಗಳ ಹಿಂದೆಯೇ ಡಿಸಿಗೆ ಆದೇಶ ಬಂದಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಇನ್ನಾದರೂ ಸರ್ಕಾರ ಈ ಬಗ್ಗೆ ಗಮನ ಹರಿಸಿ ತಮ್ಮ ಸಚಿವರ ಮಕ್ಕಳ ಕರ್ಮಕಾಂಡಕ್ಕೆ ಕಡಿವಾಣ ಹಾಕುತ್ತಾ ಕಾದುನೋಡಬೇಕಿದೆ.