ಶಬರಿಯ ದೇಗುಲಕ್ಕೆ ಶಬರಿ ಪ್ರವೇಶಿಸಬಹುದು ! ಸುಪ್ರಿಂ ಕೋರ್ಟ್ ಮಹತ್ವದ ತೀರ್ಪು !!

 

 

ಕೊನೆಗೂ ಶಬರಿ ಎಂಬ ಮಹಿಳೆಯ ಹೆಸರಿನ ಬೆಟ್ಟವನ್ನು ಮಹಿಳೆಯೂ ಹತ್ತಬಹುದು ಎಂದು ಸುಪ್ರಿಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.ಇಲ್ಲಿಯವರೆಗೂ ಮುಟ್ಟಾಗುವ ಮಹಿಳೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ನಿಷಿದ್ದವಾಗಿತ್ತು. ಈ ಮಂದಿರದಲ್ಲಿ ದೊರೆಯುವ ಪರಮ ಜ್ಞಾನವೆಂದರೆ “ಅಹಂ ಬ್ರಹ್ಮಾಸ್ಮಿ” ಎಂಬುದು. ಎಲ್ಲರೂ ದೇವರು, ದೈವಾಂಶ ಸಂಭೂತರು ಎಂಬುದು ಇದರ ಹಿಂದಿನ ತತ್ವ. ಅದಕ್ಕಾಗಿಯೇ ಅಯ್ಯಪ್ಪ ವ್ರತಧಾರಿಗಳು ಪರಸ್ಪರರನ್ನು, ಅಥವಾ ಯಾರನ್ನೇ ಆದರೂ ಸ್ವಾಮಿ ಎಂದು ಸಂಬೋಧಿಸುತ್ತಾರೆ. ಮಹಿಳೆ ಎದುರಿಗೆ ಕಂಡರೂ ಸ್ವಾಮಿಯೆಂದೇ ಸಂಬೋಧಿಸಬೇಕು. ಆದರೆ ಮಹಿಳೆಗೆ ದೇವಸ್ಥಾನ ಪ್ರವೇಶ ಮಾತ್ರ ನಿರಾಕರಿಸಲಾಗಿತ್ತು.

ಶಬರಿಮಲೆ ಯಾತ್ರೆ ಮಾಡಬೇಕಾದವರು ಕೆಲವೊಂದು ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ. ಮಂಡಲಪೂಜೆಯಲ್ಲಿ ಭಾಗವಹಿಸುವ ಯಾತ್ರಿಯು 41 ದಿನಗಳ ಕಠಿಣ ವ್ರತದಲ್ಲಿ ಇರಬೇಕಾಗುತ್ತದೆ. ಈ ಅವಧಿಯಲ್ಲಿ ಮದ್ಯ-ಮಾಂಸ, ಮಹಿಳೆಯ ಸಂಪರ್ಕ ಮುಂತಾದ ಐಹಿಕ ಸುಖಗಳಿಂದ ಆತ ದೂರವಾಗಿರಬೇಕಾಗುತ್ತದೆ ಎಂಬುದು ಅಲಿಖಿತ ನಿಯಮವಾಗಿತ್ತು. ಮದ್ಯ ಮಾಂಸದ ಜೊತೆಗೆ ಮಹಿಳೆಯನ್ನೂ ಸೇರಿಸುವ ಮೂಲಕ ಮಹಿಳೆಯನ್ನು ಸುಖಕ್ಕಾಗಿನ ಸರಕೆಂದು ಸನತಾನಿಗಳು ಯೋಚಿಸಿದ್ದರಿಂದ ಈ ಅಲಿಖಿತ ನಿಯಮ ಜಾರಿಯಲ್ಲಿದೆ ಎಂದು ಮಹಿಳಾವಾದಿಗಳ ವಾದವಾಗಿದೆ.ಮುಟ್ಟಾಗುವ ವಯಸ್ಸಿನ ಹೆಣ್ಣುಮಕ್ಕಳು ಅಯ್ಯಪ್ಪ ದೇಗುಲ ಪ್ರವೇಶಿಸಬಾರದು ಎಂಬ ಮೂಡನಂಬಿಕೆ ಮತ್ತು ಮಹಿಳಾ ಅಸಮಾನತೆಯನ್ನು ಸುಪ್ರಿಂ ಕೋರ್ಟ್ ತನ್ನ ಮಹತ್ವದ ತೀರ್ಪಿನ ಮೂಲಕ ತೊಡೆದು ಹಾಕಿದೆ.