ರಮೇಶ್ ಜಾರಕಿಹೊಳಿಗೆ ಯಾವ ಪಕ್ಷದವರು ಕರೆದಿಲ್ಲ- ಬಿಜೆಪಿ ಅಧಿಕಾರದ ಹಗಲುಕನಸಿನಲ್ಲಿದೆ- ವಿಧಾನಸೌಧದಲ್ಲಿ ಮಾಜಿಸಿಎಂ ಸಿದ್ಧು ಟೀಕೆ!

 

ad


ಕೊನೆಗೂ ಹೊಸ ಸರ್ಕಾರ ರಚಿಸಿ ಅಧಿಕಾರದ ಗದ್ದುಗೆ ಹಿಡಿಯುವ ಬಿಜೆಪಿಯವರ ಹಗಲುಗನಸಿಗೆ ಬ್ರೇಕ್​ ಬಿದ್ದಂತಾಗಿದೆ. ಕಾಂಗ್ರೆಸ್​​ನಲ್ಲಿ ಮೂಡಿದೆ ಎನ್ನಲಾದ ಅಸಮಧಾನದ ಬೆಂಕಿಗೆ ಸಿದ್ಧರಾಮಯ್ಯ ತಣ್ಣಿರು ಎರಚಿದ್ದು, ನನ್ನೊಂದಿಗೆ ಯಾವ ಕೈ ಶಾಸಕರು ಅಸಮಧಾನವಿರೋ ವಿಚಾರ ಹೇಳಿಕೊಂಡಿಲ್ಲ ಎನ್ನುವ ಮೂಲಕ ಎಲ್ಲ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ.
ವಿದೇಶದಿಂದ ಹಿಂತಿರುಗಿದಾಗಿನಿಂದಲೂ ಹಲವು ಕಾಂಗ್ರೆಸ್​ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸುತ್ತಲೇ ಇದ್ದ ಸಿದ್ಧರಾಮಯ್ಯ ಇಂದು ಅಧಿಕೃತವಾಗಿ ಅಖಾಡಕ್ಕೆ ಇಳಿದಿದ್ದು, ನಾನು ಎಲ್ಲ ಶಾಸಕರ ಜೊತೆ ಮಾತನಾಡಿದ್ದೇನೆ. ಪಕ್ಷ ಬಿಡುತ್ತೇನೆ ಎಂದು ನನ್ನ ಬಳಿ ಒಬ್ಬರೂ ಹೇಳಿಲ್ಲ. ರಮೇಶ್ ಜಾರಕಿಹೊಳಿಗೆ ಯಾವ ಪಕ್ಷದಿಂದಲೂ ಕರೆ ಬಂದಿಲ್ಲ. ರಮೇಶ್ ಜಾರಕಿಹೊಳಿ ಯಾವುದೇ ಡಿಮ್ಯಾಂಡ್​ ಇಟ್ಟಿಲ್ಲ ಎನ್ನುವ ಮೂಲಕ ಎಲ್ಲ ಗಾಸಿಪ್​ಗಳನ್ನು ತಳ್ಳಿ ಹಾಕಿದ್ದಾರೆ.

ವಿಧಾನಸೌಧದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ, ಬಿಜೆಪಿಯ ಜನ ಲಜ್ಜೆಗೆಟ್ಟವರು, ಮಾನಮರ್ಯಾದೆ ಇಲ್ಲ. ಅಧಿಕಾರಕ್ಕಾಗಿ ಹಗಲುಗನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು. ನಮ್ಮ ಪಕ್ಷದ ಸಮಸ್ಯೆಯನ್ನು ಹೈಕಮಾಂಡ್​ ಬಗೆಹರಿಸಲಿದೆ ಎಂದ ಸಿದ್ಧರಾಮಯ್ಯ ರಮೇಶ್ ಜಾರಕಿಹೊಳಿ ಬ್ರದರ್ಸ್​ ಅಸಮಧಾನವನ್ನು ತಣ್ಣಗಾಗಿಸಿದ ವಿಶ್ವಾಸದಲ್ಲಿದ್ದಂತೆ ಕಂಡುಬಂದರು.