ಕೊಡಗು-ಕೇರಳ ಸಂತ್ರಸ್ಥರಿಗೆ 20 ಲಕ್ಷ ನೆರವು- ನೆರವು ಘೋಷಿಸಿದ ಪೇಜಾವರಶ್ರೀ- ಪಕ್ಷಾತೀತವಾಗಿ ಸಮಸ್ಯೆಗೆ ಸ್ಪಂದಿಸಲು ಸ್ವಾಮೀಜಿ ಕರೆ!

ಕೊಡಗು ಹಾಗೂ ಕೇರಳದಲ್ಲಿ ಉಂಟಾದ ಪ್ರವಾಹ ಹಿನ್ನೆಲೆಯಲ್ಲಿ ಸಂತ್ರಸ್ಥರಿಗೆ ಪೇಜಾವರಮಠದಿಂದ ಪೇಜಾವರ ಶ್ರೀಗಳು ಸಹಾಯಹಸ್ತ ಚಾಚಿದ್ದಾರೆ. ಪ್ರವಾಹ ಸಂತ್ರಸ್ಥರಿಗೆ ಶ್ರೀಮಠದಿಂದ 20 ಲಕ್ಷ ರೂಪಾಯಿ ಸಹಾಯಹಸ್ತ ನೀಡಲಾಗುವುದು ಎಂದು ಶ್ರೀಗಳು ಘೋಷಿಸಿದ್ದಾರೆ.
ನಗರದ ಖಾಸಗಿ ಹೊಟೇಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸ್ವಾಮೀಜಿ, ಶ್ರಾವಣ ಮಾಸದ ಬಳಿಕ ತಾವು ಕೇರಳ ಹಾಗೂ ಮಡಿಕೇರಿಗೆ ಭೇಟಿ ನೀಡುವುದಾಗಿ ಹೇಳಿದರು. ಅಲ್ಲದೆ ಇನ್ನುಮುಂದೇ ಸರ್ಕಾರಗಳು ಯಾವುದೇ ಬೃಹತ್ ಯೋಜನೆಗಳನ್ನು ಕೈಗೊಳ್ಳುವ ಮೊದಲು ಪರಿಸರ ತಜ್ಞರು, ವಿಜ್ಞಾನಿಗಳ ಅಭಿಪ್ರಾಯ ಪಡೆಯಬೇಕು. ಎತ್ತಿನಹೊಳೆ ವಿಚಾರಕ್ಕೂ ಸರ್ಕಾರ ಕೋಲಾರ ಮತ್ತು ಕರಾವಳಿ ಭಾಗದ ಜನಪ್ರತಿನಿಧಿಗಳ ಹಾಗೂ ವಿಜ್ಞಾನಿಗಳ ಅನುಮತಿ ಪಡೆಯಬೇಕು ಎಂದು ಶ್ರೀಗಳು ಹೇಳಿದ್ದಾರೆ.

ಇನ್ನು ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಶ್ರೀಗಳು ಎರಡು ಪಕ್ಷಗಳು ಸೇರಿ ಸಮ್ಮಿಶ್ರ ಸರ್ಕಾರ ಮಾಡಿದ್ದರೂ ಒಳಗೊಳಗೆ ಗದ್ದಲವಿದೆ. ಬಿಜೆಪಿಯವರು ಅಧಿಕಾರಕ್ಕೆ ಆಸೆಪಡುತ್ತಿದ್ದರೇ ಇನ್ನೊಂದೆಡೆ ಕಾಂಗ್ರೆಸ್​​ನವರೇ ಸರ್ಕಾರ ಪತನಕ್ಕೆ ಯತ್ನಿಸುತ್ತಿದ್ದಾರೆ. ಇದು ಸರಿಯಲ್ಲ. ಕೊಡಗು ಸಂಕಷ್ಟಕ್ಕೆ ಸಿಲುಕಿರುವ ಈ ಹೊತ್ತಿನಲ್ಲಿ ಮೂರು ಪಕ್ಷಗಳು ಒಂದಾಗಿ ಸ್ಪಂದಿಸಬೇಕು ಎಂದರು.