ತಡರಾತ್ರಿ ಖಾಕಿ ಗನ್​ ಘರ್ಜನೆ- ಸರಗಳ್ಳನ ಮೇಲೆ ಬಾಣಸವಾಡಿ ಪೊಲೀಸರಿಂದ ಫೈರಿಂಗ್!

 

ad


ಬೆಂಗಳೂರಿನಲ್ಲಿ ತಡರಾತ್ರಿ ಪೊಲೀಸರು ಸರಗಳ್ಳನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಸುಹೇಲ್ ಅಲಿಯಾಸ್ ಪಪ್ಪಾಯಿ ಗುಂಡೇಟಿಗೆ ಒಳಗಾದ ಸರಗಳ್ಳ. ನಗರದಲ್ಲಿ ಕಳದ 3-4 ದಿನಗಳಿಂದ ಸರಣಿ ಸರಗಳ್ಳತನದ 9 ಪ್ರಕರಣಗಳು ದಾಖಲಾಗಿತ್ತು. ಸುಹೇಲ್ & ಗ್ಯಾಂಗ್ ಈ ಕಳ್ಳತನ ಮಾಡಿರುವ ಖಚಿತ ಮಾಹಿತಿಯನ್ನ ಪೊಲೀಸರು ಪಡೆದಿದ್ರು. ಆ ಮಾಹಿತಿ ಮೇರೆಗೆ ಬಾಣಸವಾಡಿ ಎಸಿಪಿ ಮಹದೇವಪ್ಪ ನೇತೃತ್ವದಲ್ಲಿ ತಂಡ ರಚನೆ ಮಾಡಿ ಸುಹೇಲ್ ಮತ್ತು ಆತನ ಗ್ಯಾಂಗ್​ಗಾಗಿ ಶೋಧ ಕಾರ್ಯ ನಡೆಸುತ್ತಿದ್ರು.

ಈ ವೇಳೆ ಸುಹೇಲ್ ಆ್ಯಂಡ್ ಗ್ಯಾಂಗ್ ಬಾಣಸವಾಡಿ ಅಗ್ನಿಶಾಮಕದಳ ಸ್ಟೇಷನ್ ರಸ್ತೆಯಲ್ಲಿ ಇರುವುದಾಗಿ ಮಾಹಿತಿ ಬಂದಿತ್ತು. ಸ್ಥಳಕ್ಕೆ ತೆರಳಿದ ಬಾಣಸವಾಡಿ ಇನ್ಸ್​ಪೆಕ್ಟರ್​ ಮುನಿಕೃಷ್ಣ ತಂಡ ಸುಹೇಲ್ ಬಂಧನಕ್ಕೆ ಮುಂದಾಗಿತ್ತು. ಈ ವೇಳೆಯಲ್ಲಿ ಸುಹೇಲ್ ಮಾರಕಾಸ್ತ್ರದಿಂದ ಸಬ್ ಇನ್ಸ್ ಪೆಕ್ಟರ್ ಶರತ್ ಹಾಗೂ ಮುಖ್ಯಪೇದೆ ರಫೀಕ್ ಮೇಲೆ ಹಲ್ಲೆಗೆ ಮುಂದಾಗಿದ್ದ. ಈ ಹಿನ್ನೆಲೆಯಲ್ಲಿ ಇನ್ಸ್​ಪೆಕ್ಟರ್ ಮುನಿಕೃಷ್ಣ, ಸುಹೇಲ್​ನ ಎರಡೂ ಕಾಲುಗಳಿಗೆ ಗುಂಡು ಹಾರಿಸಿದ್ದಾರೆ.
ಸದ್ಯ ಸುಹೇಲ್ ಹಾಗೂ ಹಲ್ಲೆಗೊಳಗಾದ ಪೊಲೀಸ್ ಇಬ್ಬರನ್ನೂ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಣಸವಾಡಿ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದಲ್ಲಿ ಕೆಲದಿನಗಳಿಂದ ಮತ್ತೆ ಸರಗಳ್ಳತನ ಆರಂಭವಾಗಿದ್ದರಿಂದ ಜನರು ಕಂಗಾಲಾಗಿದ್ದರು. ಹೀಗಾಗಿ ಸರಗಳ್ಳರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಪೊಲೀಸ್ ಇಲಾಖೆ ಸರಗಳ್ಳರನ್ನು ಮಟ್ಟಹಾಕಲು ಹಿಂದೆಂದಿಗಿಂತ ಹೆಚ್ಚಿನ ಆಸಕ್ತಿ ವಹಿಸುತ್ತಿದೆ.