ಸಲಿಂಗ ಸಂಭ್ರಮ !! ಸೆಕ್ಸ್ ಆಯ್ಕೆ ಅವರವರದ್ದು !! ಸುಪ್ರಿಂ ಕೋರ್ಟ್ ಮಹತ್ವದ ತೀರ್ಪು

ಕೊನೆಗೂ ಸಲಿಂಗ ಲೈಂಗಿಕ ಸಂಬಂಧ ಬಯಸುವ ಸಮುದಾಯಕ್ಕೆ ಜಯ ಸಿಕ್ಕಿದೆ. ಯಾರು ಯಾರನ್ನು ಬೇಕಾದರೂ ಪ್ರೇಮಿಸಬಹುದು ಎಂಬ ಮಹತ್ವದ ತೀರ್ಪನ್ನು ಸುಪ್ರಿಂ ಕೋರ್ಟ್ ನೀಡಿದೆ. ಸಲಿಂಗ ಸಂಬಂಧ ಅಪರಾಧ ಎಂದು ಸಾರುವ 158 ವರ್ಷದಷ್ಟು ಹಳೆಯದಾದ ಐಪಿಸಿ ಸೆಕ್ಷನ್‌ 377ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತಂತೆ ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ಪ್ರಕಟಿಸಿದ್ದು, ಸಲಿಂಗ ಸಂಬಂಧ ಅಪರಾಧವಲ್ಲ ಎಂದು ಹೇಳಿದೆ.

ad


ಸಲಿಂಗ ಹಕ್ಕುಗಳ ಹೋರಾಟಗಾರರು ಸೇರಿದಂತೆ ವಿವಿಧ ವ್ಯಕ್ತಿ, ಸಂಘ-ಸಂಸ್ಥೆಗಳ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಮುಖ್ಯ ನ್ಯಾಯಾಧೀಶ ನ್ಯಾ. ದೀಪಕ್‌ ಮಿಶ್ರಾ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ ಜು.17ರಂದು ಕಾಯ್ದಿರಿಸಿದ್ದ ತೀರ್ಪನ್ನು ಇಂದು ಪ್ರಕಟ ಮಾಡಿದೆ.

 

 

ನ್ಯಾ. ರೋಹಿನ್ಟನ್‌ ನಾರಿಮನ್‌, ನ್ಯಾ. ಎ.ಎಂ. ಖಾನ್ವಿಲ್ಕರ್‌, ನ್ಯಾ. ಡಿ.ವೈ. ಚಂದ್ರಚೂಡ ಹಾಗೂ ನ್ಯಾ. ಇಂದೂ ಮಲ್ಹೋತ್ರಾ ಅವರು ಪೀಠದ ಇತರ ಸದಸ್ಯರಿಂದ ತೀರ್ಪು ಪ್ರಕಟವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ಸಲ್ಲಿಸಲು ಮೊದಲು ಸಮಯಾವಕಾಶ ಕೇಳಿದ್ದ ಕೇಂದ್ರ ಸರ್ಕಾರ, ತದನಂತರದಲ್ಲಿ ಈ ವಿಚಾರವನ್ನು ಸುಪ್ರೀಂಕೋರ್ಟಿನ ವಿವೇಚನೆಗೆ ಬಿಟ್ಟಿತ್ತು.

ಐಪಿಸಿ ಸೆಕ್ಷನ್‌ 377 ಎಂಬುದು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಸಂಬಂಧಿಸಿದ್ದಾಗಿದೆ. ಯಾವುದೇ ವ್ಯಕ್ತಿ ಪ್ರಕೃತಿಗೆ ವಿರುದ್ಧವಾಗಿ ಪುರುಷ, ಮಹಿಳೆ ಅಥವಾ ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ನಡೆಸಿದರೆ ಜೀವಾವಧಿ ಅಥವಾ 10 ವರ್ಷದವರೆಗೂ ವಿಸ್ತರಿಸಬಹುದಾದ ಶಿಕ್ಷೆ ವಿಧಿಸಬಹುದು ಹಾಗೂ ದಂಡ ಹೇರಬಹುದು ಎಂದು ಈ ಕಾಯ್ದೆ ಹೇಳುತ್ತದೆ.

 

 

2001ರಲ್ಲಿ ಈ ಕಾಯ್ದೆಯ ವಿರುದ್ಧ ನಾಝ್‌ ಫೌಂಡೇಷನ್‌ ಎಂಬ ಎನ್‌ಜಿಒ ದೆಹಲಿ ಹೈಕೋರ್ಟ್‌ ಮೊರೆ ಹೋಗಿತ್ತು. 2009ರಲ್ಲಿ ಆ ನ್ಯಾಯಾಲಯ ಸಲಿಂಗ ಲೈಂಗಿಕ ಸಂಬಂಧವನ್ನು ಅಪರಾಧಮುಕ್ತಗೊಳಿಸಿ ಐತಿಹಾಸಿಕ ತೀರ್ಪು ನೀಡಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಕೆಯಾಗಿತ್ತು. 2013ರಲ್ಲಿ ದೆಹಲಿ ಹೈಕೋರ್ಟ್‌ ತೀರ್ಪನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿ, ಸಲಿಂಗ ಲೈಂಗಿಕ ಸಂಬಂಧ ಅಕ್ರಮ ಎಂದು ಕರೆದಿತ್ತು. ಈ ತೀರ್ಪಿಗೆ ವ್ಯಾಪಕ ಟೀಕೆ-ಟಿಪ್ಪಣಿಗಳು, ಪರ-ವಿರೋಧಗಳು ಕೇಳಿಬಂದಿದ್ದವು.

 

ಅಂತಿಮವಾಗಿ ಇಂದು ಸಲಿಂಗ ಲೈಂಗಿಕ ಸಂಬಂಧ ಅಪರಾಧವಲ್ಲ ಎಂದು ಸುಪ್ರಿಂ ಮಹತ್ವದ ತೀರ್ಪು ನೀಡಿದೆ. ದೇಶದಲ್ಲಿ ಸಮಾನತೆ ಹೇಗೋ ಹಾಗೆ ಸಮಾನ ಪ್ರೇಮ ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ. ದೇಶದಲ್ಲಿ ಸಲಿಂಗ ಕಾಮ ಅಪರಾಧವಲ್ಲ. ಕಾಲ ಬದಲಾದಂತೆ ಕಾನೂನು ಬದಲಾಗಬೇಕಿದೆ. ಬ್ರಿಟಿಷರ ಕಾಲದ ಸೆಕ್ಷನ್ 377ಗೆ ಯಾವುದೇ ತರ್ಕವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತು.