ಸಾಹಿತ್ಯದ ಖನಿಜ ಭಂಡಾರ : ಕರ್ನಾಟಕ ಏಕೀಕರಣ ಹೋರಾಟಗಾರ ಕೋ.ಚೆನ್ನಬಸಪ್ಪ ಇನ್ನಿಲ್ಲ.

ಕ‌ನ್ನಡ ಪ್ರಜ್ಞೆಯನ್ನು ಉಸಿರಾಗಿಸಿಕೊಂಡಿದ್ದ ಹಿರಿಜೀವ ಕೋ ಚನ್ನಬಸಪ್ಪ, ಕುವೆಂಪು ಅವರ ಪರಮಾಪ್ತ ಶಿಷ್ಯರಾಗಿದ್ರು. ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 98 ವರ್ಷದ ಕೋ.ಚನ್ನಬಸಪ್ಪ ರವರು ಶನಿವಾರ ಬೆಳಿಗ್ಗೆ 7.30 ಕ್ಕೆ ಉಸಿರಾಟ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ.
ಕೋ.ಚೆನ್ನಬಸಪ್ಪ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಆಲೂರಿನಲ್ಲಿ ಜನಿಸಿದ್ದ ಚನ್ನಬಸಪ್ಪ ಸ್ವಾತಂತ್ರ ಹೋರಾಟಗಾರ, ನ್ಯಾಯವಾದಿಯಾಗಿದ್ದರು. ವಿದ್ಯಾರ್ಥಿ ಆಗಿದ್ದಾಗಲೇ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ ಕೋ.ಚೆನ್ನಬಸಪ್ಪ ಸಾಹಿತ್ಯ ವಲಯದಲ್ಲಿ ಕೊಚೆ ಎಂದೇ ಪ್ರಖ್ಯಾತ. ಕುವೆಂಪು ಆಪ್ತವರ್ಗದಲ್ಲಿ ಗುರುತಿಸಿಕೊಂಡಿದ್ದ ಇವರು ಸಾಹಿತ್ಯ ಪ್ರೇಮಿಯಷ್ಟೇ ಅಲ್ಲದೆ ಅನೇಕ ಕೃತಿಗಳ ರಚನಾಕಾರರೂ ಸಹ ಆಗಿದ್ದಾರೆ.

ad


‘ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ’ ಸೇರಿದಂತೆ ಹಲವಾರು ಮಹತ್ವದ ಕೃತಿಗಳನ್ನು ಇವರು ರಚಿಸಿದ್ದು ಖಜಾನೆ, ರಕ್ತತರ್ಪಣ, ಹಿಂದಿರುಗಿ ಬರಲಿಲ್ಲ, ನ್ಯಾಯಾಲಯದ ಸತ್ಯಕಥೆಗಳು, ಹೃದಯ ನೈವೇದ್ಯ, ಬೆಳಕಿನೆಡೆಗೆ ಇನ್ನೂ ಮೊದಲಾದವು ಇವರ ಪ್ರಮುಖ ಕೃತಿಗಳಾಗಿದೆ.
ವಿಜಯಪುರದಲ್ಲಿ 2015ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಚನ್ನಬಸಪ್ಪ ಅವರಿಗೆ “ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ”ಗೆ ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ಪುರಸ್ಕಾರ ಲಭಿಸಿದೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ.ಉಗ್ರಾಣ ಪ್ರಶಸ್ತಿ.ಸ.ಸ.ಮಾಳವಾಡ ಪ್ರಶಸ್ತಿ .ಚಿಂತನಶ್ರೀ ಪ್ರಶಸ್ತಿ.ಸಂ.ಶಿ. ಭೂಸನೂರ ಮಠ ಪ್ರಶಸ್ತಿ . ಕನ್ನಡಶ್ರೀ ಪ್ರಶಸ್ತಿ .ವಿಶ್ವಮಾನವ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳೂ ಇವರಿಗೆ ಸಂದಿದೆ

ಸಿದ್ದರಾಮಯ್ಯ ಸಂತಾಪ
ಹಿರಿಯ ಸಾಹಿತಿ ಕೊ. ಚೆನ್ನಬಸಪ್ಪ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.”ಕರ್ನಾಟಕ ಏಕೀಕರಣದ ಹೋರಾಟಗಾರ, ಕ‌ನ್ನಡ ಪ್ರಜ್ಞೆಯನ್ನು ಉಸಿರಾಗಿಸಿಕೊಂಡ ಹಿರಿಜೀವ,  ಕುವೆಂಪು ಅವರ ಪರಮಾಪ್ತ ಶಿಷ್ಯ, ವೈಯಕ್ತಿಕವಾಗಿ ಸದಾ ನನಗೆ ಮಾರ್ಗದರ್ಶನ ನೀಡುತ್ತಿದ್ದ ಹಿತೈಷಿ ಕೋ.ಚೆನ್ನಬಸಪ್ಪನವರ‌ ಅಗಲಿಕೆಯ ಸುದ್ದಿ ಆಘಾತವನ್ನುಂಟು ಮಾಡಿದೆ. ಆ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ.” ಎಂದು ಅವರು ಟ್ವೀಟ್ ಮಾಡಿದ್ದಾರೆ.