ಕೇಂದ್ರದಲ್ಲಿ ಸರ್ಕಾರ ರಚನೆ ಸರ್ಕಸ್​ ಆರಂಭ! ಮಾಜಿ ಪ್ರಧಾನಿ ದೇವೆಗೌಡರನ್ನು ಭೇಟಿ ಮಾಡಿದ ಆಂಧ್ರಸಿಎಂ ನಾಯ್ಡು!!

ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಎನ್​ಡಿಎಯೇತರ ಸರ್ಕಾರ ರಚನೆಯ ಸರ್ಕಸ್​ ಕೂಡಾ ಜೋರಾಗಿದೆ. ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಗಾಗಿ ಟೊಂಕಕಟ್ಟಿ ನಿಂತಿರುವ ಎಲ್ಲ ನಾಯಕರು ಈಗಾಗಲೇ ಪ್ರಯತ್ನ ಆರಂಭಿಸಿದ್ದು, ಇದರ ಮೊದಲ ಹಂತ ಎಂಬಂತೆ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ನಿನ್ನೆ ಮಾಜಿ ಪ್ರಧಾನಿ ದೇವೆಗೌಡರನ್ನು ಪದ್ಮನಾಭನಗರದಲ್ಲಿ ಭೇಟಿ ಮಾಡಿದರು.

ad

ಲೋಕಸಭಾ ಚುನಾವಣೆ ಬಳಿಕ ಸರ್ಕಾರ ರಚನೆಯ ಬಗ್ಗೆ ದೇವೆಗೌಡರ ಜೊತೆ ನಾಯ್ಡು ಚರ್ಚೆ ನಡೆಸಿದ್ದು, ಕೇಂದ್ರದಲ್ಲಿ ಬಿಜೆಪಿ ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ಅಧಿಕಾರಕ್ಕೆ ತರುವ ರಣತಂತ್ರಗಳನ್ನು ರೂಪಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿಎಂ ಕುಮಾರಸ್ವಾಮಿ ಕೂಡ ಹಾಜರಿದ್ದರು.

ದೇವೆಗೌಡರೊಂದಿಗೆ ಮಾತನಾಡಿದ ಬಳಿಕ ಚಂದ್ರಬಾಬು ನಾಯ್ಡು, ಬಿಎಸ್​ಪಿ ವರಿಷ್ಠೆ ಮಾಯಾವತಿ, ಎಸ್​ಪಿ ನಾಯಕ ಅಖಿಲೇಶ್ ಯಾದವ್, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ಮುಖಂಡರ ಜೊತೆಗೂ ಮಾತುಕತೆ ನಡೆಸಿದ್ದಾರೆ.


ಇದರೊಂದಿಗೆ ಫಲಿತಾಂಶದ ಬಳಿಕ ವಿವಿಪ್ಯಾಟ್​ಗಳ ಬಗ್ಗೆ ಇರುವ ಅಸಮಧಾನದ ಹೋರಾಟ ಕೂಡ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇರೋದರಿಂದ ಆ ಬಗ್ಗೆ ಕೂಡ ನಾಯ್ಡು ದೇವೆಗೌಡರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಫಲಿತಾಂಶಕ್ಕೂ ಮುನ್ನವೇ ಕೇಂದ್ರದಲ್ಲಿ ಚಟುವಟಿಕೆಗಳು ಗರಿಗೆದರಿವೆ.