ತಹಶೀಲ್ದಾರ ನಾಪತ್ತೆ- ಬೆಚ್ಚಿಬಿದ್ದ ಸಾಂಸ್ಕೃತಿಕ ನಗರಿ

ad

ಬೆಂಗಳೂರಿಗೆ ತೆರಳೋದಾಗಿ ಹೊರಟಿದ್ದ ತಹಸೀಲ್ದಾರ್ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದು, ದುಷ್ಕರ್ಮಿಗಳು ಕಿಡ್ನಾಪ್ ಮಾಡಿರೋ ಶಂಕೆ ವ್ಯಕ್ತವಾಗಿದೆ. ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಚಿಕ್ಕವಡ್ಡರಗುಡಿ ಗ್ರಾಮದ ಬಳಿ ಮೈಸೂರು –ಹಾಸನ ರಸ್ತೆಯಲ್ಲಿ ತಹಶೀಲ್ದಾರ್ ಮಹೇಶ್ ಚಂದ್ರ ಅವರನ್ನ ಅಪಹರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

 

ಮಹೇಶ್ ಚಂದ್ರ ಮಂಡ್ಯದ ಕೆ.ಆರ್ ಪೇಟೆ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ದಿನನಿತ್ಯ ಕೆ.ಆರ್ ನಗರದಿಂದ ಕೆ.ಆರ್ ಪೇಟೆಗೆ ಕಾರಿನಲ್ಲಿ ಓಡಾಡುತ್ತಿದ್ದರು. ಈ ನಡುವೆ ನಿನ್ನೆ ರಾತ್ರಿ ಕರ್ತವ್ಯಕ್ಕೆ ರಜೆ ಹಾಕಿ ಬೆಂಗಳೂರಿಗೆ ತೆರಳೋದಾಗಿ ಮನೆಯಿಂದ ಹೊರಟಿದ್ದ ವೇಳೆ ಚಿಕ್ಕವಡ್ಡರಗುಡಿ ಬಳಿಯಿಂದ ತಹಶೀಲ್ದಾರ್ ಮಹೇಶಚಂದ್ರ ನಾಪತ್ತೆಯಾಗಿದ್ದು, ಅಲ್ಲಿಯೇ ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂಬ ಸಂದೇಹ ವ್ಯಕ್ತವಾಗಿದೆ.
ಇನ್ನು ಮಹೇಶ್ ಚಂದ್ರ ಪ್ರಯಾಣಿಸುತ್ತಿದ್ದ ಅವರ ಓಮ್ನಿ ಕಾರು ಮತ್ತು ಶೂ ಮೈಸೂರು –ಹಾಸನ ರಸ್ತೆ ಬಳಿ ಪತ್ತೆಯಾಗಿದೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ರಘು, ಸಾಲಿಗ್ರಾಮ ಪಿಎಸ್ ಐ ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದು ವಾರದ ಹಿಂದೆ ಕೆ.ಆರ್.ನಗರದಿಂದ ವರ್ಗಾವಣೆಗೊಂಡಿದ್ದರು.