ಇಂದು ಎಚ್ ಡಿ ಕೆ – ಸಿದ್ದರಾಮಯ್ಯ ಮುಖಾಮುಖಿ !! ಸಮನ್ವಯವೊ? ಸಮರವೊ ?

 

ಭಾರೀ ತಿಕ್ಕಾಟದ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಸಭೆ ಇಂದು ನಡೆಯಲಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖಾಮುಖಿ ಆಗಲಿದ್ದಾರೆ. ಈ ಸಂಧರ್ಭದಲ್ಲಿ ತಮ್ಮ ಹೇಳಿಕೆ ವಿವಾದಗಳ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡೋ ಸಾಧ್ಯತೆ ಇದೆ.ಎಚ್ ಡಿಕುಮಾರಸ್ವಾಮಿ ಬಜೆಟ್ ಮಂಡಿಸಬಾರದು ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ನಂತರ ಪ್ರಕೃತಿ ಚಿಕಿತ್ಸೆಗಾಗಿ ಧರ್ಮಸ್ಥಳಕ್ಕೆ ತೆರಳಿದ್ದರು. ಈ ನಡುವಿನ 15 ದಿನಗಳ ಅವಧಿಯಲ್ಲಿ ಸಾಕಷ್ಟು ರಾಜಕೀಯ ವಿದ್ಯಮಾನಗಳ ಜತೆಗೆ ಹಾಲಿ ಹಾಗೂ ಮಾಜಿ ಸಿಎಂ ನಡುವೆ ಬಹಿರಂಗ ಗುದ್ದಾಟವೂ ನಡೆದಿದೆ. ಸರಕಾರ ಒಂದುವರ್ಷ ಬಾಳಿಕೆ ಬರುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದರೆ, ಸೋತವರು ಮಂಡಿಸಿರೋ ಬಜೆಟ್ ಮುಂದುವರೆಸಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು.ಇವೆಲ್ಲದರ ನಡುವೆಯೇ 2ನೇ ಬಾರಿಗೆ ಇಂದು ಸಮನ್ವಯ ಸಮಿತಿ ಸಭೆ ನಿಗದಿಯಾಗಿದೆ.
ಮುಖ್ಯಮಂತ್ರಿ ಅವರು 5 ರಂದು ಬಜೆಟ್‌ ಮಂಡಿಸಲಿರುವುದರಿಂದ ಉಭಯ ಪಕ್ಷಗಳ ಪ್ರಣಾಳಿಕೆಗಳನ್ನು ಒಂದೂಗೂಡಿಸಿ ರೂಪಿಸಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ಈ ಸಭೆಯು ಅಂತಿಮ ರೂಪ ನೀಡಲಿದೆ. ರೈತರ ಸಾಲ ಮನ್ನಾದ ಜತೆಗೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳ ಜನಪ್ರಿಯ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆಯೂ ಸಮನ್ವಯ ಸಮಿತಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.

ಸಂಪುಟ ವಿಸ್ತರಣೆ ವಿಚಾರಕ್ಕೆ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿದ್ದ ಅಸಮಾಧಾನ ಮೇಲ್ನೋಟಕ್ಕೆ ತಣ್ಣಗಾಗಿದ್ದರೂ ಸಚಿವಾಕಾಂಕ್ಷಿಗಳು ಅಧಿವೇಶನಕ್ಕೆ ಮುನ್ನವೇ ಸಂಪುಟ ವಿಸ್ತರಣೆ ಮಾಡಬೇಕೆಂದು ಒತ್ತಡ ತರುತ್ತಿದ್ದಾರೆ.ನಿಗಮ, ಮಂಡಳಿಗಳ ನೇಮ ಹಾಗೂ ಅಧಿವೇಶನ ಅಂತ್ಯಗೊಂಡ ನಂತರ ಸಂಪುಟ ವಿಸ್ತರಣೆ ಬಗ್ಗೆ ಸಮಾಲೋಚಿಸುವ ಸಾಧ್ಯತೆಗಳಿವೆ.ಸಮನ್ವಯ ಸಮಿತಿ ಸಭೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಹಾಗೂ ಜೆಡಿಎಸ್‌ನ ಡ್ಯಾನಿಷ್‌ ಆಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಉಳಿದಂತೆ ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸುವರು.ಜಿಲ್ಲಾ ಉಸ್ತುವಾರಿ ಸಚಿವರ ನೇಮಕ , ಐಎಎಸ್‌ ಅಧಿಕಾರಿಗಳ ವರ್ಗಾವಣೆ, ಸಂಪುಟ ವಿಸ್ತರಣೆ, ನಿಗಮಮಂಡಳಿ ನೇಮಕ, ತಮ್ಮದಲ್ಲದ ಇಲಾಖೆಯಲ್ಲಿ ಕೆಲ ಸಚಿವರ ಹಸ್ತಕ್ಷೇಪ, ರೈತರ ಸಂಪೂರ್ಣ ಸಾಲ ಮನ್ನಾ ಸೇರಿದಂತೆ ಹಲವು ವಿಷಯಗಳು ಸಮನ್ವಯ ಸಮಿತಿಯಲ್ಲಿ ಚರ್ಚೆಯಾಗಲಿದೆ.