ಜೆಡಿಎಸ್​ ಅಧ್ಯಕ್ಷರಾಗಿ ವಿಶ್ವನಾಥ- ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ದೊಡ್ಡಗೌಡ್ರು!

ad

ಅತ್ಯಂತ ಕುತೂಹಲ ಮೂಡಿಸಿದ್ದ ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನ ಕೊನೆಗೂ ಮೈಸೂರಿನ ಎಚ್.ವಿಶ್ವನಾಥ ಪಾಲಾಗುವ ಮುನ್ಸೂಚನೆ ದೊರೆತಿದೆ. ಹೌದು ಬಹುತೇಕ ಮಾಜಿ ಸಂಸದ ಹಾಗೂ ಹಾಲಿ ಹುಣಸೂರು ಶಾಸಕ ಎಚ್.ವಿಶ್ವನಾಥ ಜೆಡಿಎಸ್​ ಚುಕ್ಕಾಣಿ ಹಿಡಿಯೋದು ಅಂತಿಮವಾಗಿದ್ದು, ಸಿದ್ಧರಾಮಯ್ಯನವರಿಗೆ ಸಮರ್ಥವಾದ ತಿರುಗೇಟು ನೀಡಲು ದೊಡ್ಡ ಗೌಡರು ಸಖತ್​ ಪ್ಲ್ಯಾನ್ ಮಾಡಿದಂತಿದೆ.
ಜೆಡಿಎಸ್​ ರಾಜ್ಯಾಧ್ಯಕ್ಷರಾಗಿದ್ದ ಕುಮಾರಸ್ವಾಮಿ ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿರೋದರಿಂದ ಜೆಡಿಎಸ್​​ ಚುಕ್ಕಾಣಿ ಹಿಡಿಯೋರು ಯಾರು ಎಂಬ ಪ್ರಶ್ನೆ ಕೆಲ ದಿನಗಳಿಂದ ಮುನ್ನಲೆಗೆ ಬಂದಿತ್ತು. ಇದೇ ವೇಳೆ ಜೆಡಿಎಸ್​ನ ಹಿರಿಯ ನಾಯಕರಾದ ಬಸವರಾಜ ಹೊರಟ್ಟಿ, ಮಾಜಿ ಶಾಸಕ ವೈ.ಎಸ್.ವಿದತ್ತಾ ಹಾಗೂ ಮಧುಬಂಗಾರಪ್ಪ ಸೇರಿದಂತೆ ಹಲವು ನಾಯಕರ ಹೆಸರುಗಳು ಕೂಡ ಕೇಳಿಬಂದಿದ್ದವು.
ಆದರೇ ಕೊನೆಗೂ ತಮ್ಮ ರಾಜಕೀಯ ಅನುಭವ ಬಳಸಿದ ಮಾಜಿ ಪ್ರಧಾನಿ ದೇವೆಗೌಡರು ತಮ್ಮ ಪಕ್ಷದ ರಾಜ್ಯಾಧ್ಯಕ್ಷರಾಗಿ ಕುರುಬ ಸಮಾಜದ ಎಚ್.ವಿಶ್ವನಾಥ ಅವರಿಗೆ ಮಣೆ ಹಾಕುವ ಮೂಲಕ ಹಲವು ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಸಂಸದರಾಗಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕರಾಗಿ ಅಪಾರ ರಾಜಕೀಯ ಅನುಭವ ಹೊಂದಿರುವ ಎಚ್.ವಿಶ್ವನಾಥ ಕೆಲ ವೇಳೆ ಕಾಂಗ್ರೆಸ್​ನಲ್ಲಿದ್ದುಕೊಂಡೇ ಕಾಂಗ್ರೆಸ್​​ನ ಕಾರ್ಯವೈಖರಿ ಟೀಕಿಸುವ ಮೂಲಕ ಪಕ್ಷಕ್ಕೆ ಮುಜುಗರ ತಂದಿದ್ದರು.

ಅಷ್ಟೇ ಅಲ್ಲ ಚುನಾವಣೆ ವೇಳೆ ಕಾಂಗ್ರೆಸ್​ ತೊರೆದು ಜೆಡಿಎಸ್​ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಶಾಸಕರಾಗಿದ್ದಾರೆ. ಸದಾಕಾಲ ಸಿದ್ಧರಾಮಯ್ಯ ವಿರುದ್ಧ ಚಾಟಿ ಬೀಸುತ್ತಲೇ ಇರುವ ವಿಶ್ವನಾಥ ಮೈಸೂರು ಸೇರಿದಂತೆ ರಾಜ್ಯದಲ್ಲಿ ಜೆಡಿಎಸ್​ ಸಂಘಟಿಸಲು ಸೂಕ್ತ ವ್ಯಕ್ತಿ ಎಂಬುದು ಗೌಡರ್ ಲೆಕ್ಕಾಚಾರ.
ಅಷ್ಟೇ ಅಲ್ಲ, ಹಿರಿಯ ರಾಜಕೀಯ ನಾಯಕರಾಗಿರುವ ಎಚ್.ವಿಶ್ವನಾಥ್​​ಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ಇರೋದರಿಂದ ಮುನಿಸಿಕೊಂಡಿದ್ದರು. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ದೇವೆಗೌಡರು ಹಾಗೂ ಕುಮಾರಸ್ವಾಮಿ ನಿರ್ಧರಿಸಿದ್ದು, ಹೀಗಾಗಿ ಇನ್ನೇನು ಕೆಲ ದಿನಗಳಲ್ಲಿ ವಿಶ್ವನಾಥ ತೆನೆಹೊತ್ತ ಪಕ್ಷದ ಅಧ್ಯಕ್ಷ ಪದವಿ ಹೊತ್ತು ಮುನ್ನಡೆಸಲಿದ್ದಾರೆ.