ಮಂತ್ರಾಲಯದಲ್ಲಿ ನಡೆದ RSS ಬೈಠಕ್ ನಲ್ಲಿ ಏನೇನಾಯ್ತು? ಲೋಕಸಭೆ ಎದುರಿಸುವ ತಂತ್ರಗಳೇನು?

 

ಮಂತ್ರಾಲಯದಲ್ಲಿ ನಡೆಯುತ್ತಿದ್ದ ದೇಶದ ಅತಿದೊಡ್ಡ ಸಾಂಸ್ಕೃತಿಕ ಸಂಘಟನೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರೆಸ್ಸೆಸ್​ನ 2 ದಿನಗಳ ಬೈಠಕ್ ನಿನ್ನೆ ಸಮಾರೋಪಗೊಂಡಿತು. ಬೈಠಕ್​ನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಧರ್ಮದ ಹೆಸರಿನಲ್ಲಿ ಆರ್​ಎಸ್ಎಸ್​ನ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿರುವ ಪ್ರವೃತ್ತಿ ಬಗ್ಗೆ ಅಸಮಧಾನ ವ್ಯಕ್ತವಾಗಿದೆ.
ಬೈಠಕ್​ನಲ್ಲಿ ಆರೆಸ್ಸೆಸ್​ ಅಡಿಯಲ್ಲಿ ದೇಶ ವಿದೇಶಗಳಲ್ಲಿ ಕಾರ್ಯನಿರ್ವಹಿಸುವ 35ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ 200ಕ್ಕೂ ಹೆಚ್ಚು ಪ್ರಮುಖರು ಭಾಗಿಯಾಗಿದ್ರು. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ, ರಾಷ್ಟ್ರ ಮುಖಂಡ ರಾಮ್​ ಮಾಧವ್​ ಸೇರಿದಂತೆ ಹಲವು ರಾಜಕೀಯ ಮುಖಂಡರು ಬೈಠಕ್​ನಲ್ಲಿ ಭಾಗಿಯಾಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.

ಬೈಠಕ್​ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಆರ್​.ಎಸ್​.ಎಸ್​.ನ ಸಹಕಾರ್ಯವಾಹ ಮನಮೋಹನ ವೈದ್ಯ, ಸಮಾಜವನ್ನು ರಾಜಕೀಯ ಲಾಭಕ್ಕಾಗಿ ದಾರಿ ತಪ್ಪಿಸುವವರ ವಿರುದ್ಧ ಜನಜಾಗೃತಿ ಮೂಡಿಸಲು ಆರ್​.ಎಸ್​.ಎಸ್​. ಪ್ರಮುಖರಲ್ಲಿ ಸಹಮತ ವ್ಯಕ್ತವಾಗಿದೆ ಎಂದರು. ಅಲ್ಲದೇ 2019 ರ ಚುನಾವಣೆಗೆ ಸಂಬಂಧಿಸಿ ಯಾವುದೇ ಚರ್ಚೆ ಅಥವಾ ಒಟ್ಟಾರೆ ರಾಜಕೀಯ ವಿಷಯಗಳ ಕುರಿತು ಚರ್ಚೆ ಆಗಿಲ್ಲ ಎಂದು ಆರೆಸ್ಸೆಸ್​ ಮುಖಂಡರು ಸ್ಪಷ್ಟಪಡಿಸಿದ್ದಾರೆ.