ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶಾವಕಾಶ- ತೀರ್ಪು ಸ್ವಾಗತಿಸಿದ ಖರ್ಗೆ!

 

ಬಹು ವರ್ಷಗಳಿಂದ ಪರ ವಿರೋಧಕ್ಕೆ ಎಡೆಮಾಡಿಕೊಟ್ಟಿದ್ದ ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋಟ್೯ ಗ್ರೀನ್ ಸಿಗ್ನಲ್ ನೀಡಿರುವುದಕ್ಕೆ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ‌ ಮಲ್ಲಿಕಾರ್ಜುನ ಖರ್ಗೆ ಸ್ವಾಗತಿಸಿದ್ದಾರೆ.
ಕಲಬುರಗಿ ನಿವಾಸದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, ಅಯ್ಯಪ್ಪನ ಸನ್ನಿದಿಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವುದು ಐತಿಹಾಸಿಕ ತೀರ್ಪು ಎಂದರು. ಈ ಹಿಂದೆ ನಮ್ಮಂಥವರಿಗೆ (ದಲಿತರಿಗೆ) ಅಯ್ಯಪ್ಪ ದೇವಸ್ಥಾನ ಸೇರಿದಂತೆ ದೇಶದ ವಿವಿಧ ದೇವಸ್ಥಾನಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿತ್ತು. ಅಸ್ಪಶ್ಯರು ಅನ್ನೊ ಕಾರಣಕ್ಕೆ ನಮ್ಮನ್ನ ದೂರ ಇಡುತ್ತಿದ್ದರು.

ಭಾರತ ದೇಶದಲ್ಲಿ ಮತ್ತು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಇಂತಹ ಅನಿಷ್ಟ ಪದ್ದತಿ ಇನ್ನು ಜೀವಂತವಾಗಿರುವುದಕ್ಕೆ ಖರ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಈ ಒಂದು ತೀರ್ಪಿನಿಂದ ಮಹಿಳೆಯರು ಮತ್ತು ಪುರುಷರು ಸಮಾನರನ್ನಾಗಿ ಕಾಣಲು ಪ್ರೇರಣೆಯಾಗಲಿದ್ದು, ಹಲವು ವರ್ಷಗಳ ವಿವಾದಕ್ಕೆ ಸುಪ್ರೀಂ ಕೋಟ್೯ ತಾರ್ಕಿಕ ಅಂತ್ಯ ಕಾಣಿಸಿದೆ ಅಂತಾ ವಿಶ್ಲೇಷಿಸಿದರು.