ಕೊನೆಗೂ ಅದೃಷ್ಟದ ಮನೆ ತೊರೆದ ಯಶ್​​! ಬಾಡಿಗೆಮನೆ ವಿವಾದಕ್ಕೆ ಅಂತ್ಯಹಾಡಿದ ರಾಕಿಂಗ್ ಸ್ಟಾರ್​​!!

ಸ್ಯಾಂಡಲವುಡ್​ನಲ್ಲಿ ಚರ್ಚೆಗೀಡಾಗಿದ್ದ ಹಾಗೂ ರಾಕಿಂಗ್ ಸ್ಟಾರ್​​ ಯಶ್​ಗೆ ತೀವ್ರ ಮುಜುಗರ ತಂದಿದ್ದ ಬಾಡಿಗೆ ಮನೆ ವಿವಾದಕ್ಕೆ ಕೊನೆಗೂ ಯಶ್​ ಅಂತ್ಯ ಹಾಡಿದ್ದಾರೆ. ಹೌದು ಯಶ್​ ಕೊನೆಗೂ ಮನೆ ಖಾಲಿ ಮಾಡಿದ್ದು, ಮನೆ ಮಾಲೀಕರಿಗೆ ಬಾಡಿಗೆ ಮನೆಯ ಕೀ ಹಸ್ತಾಂತರಿಸಿದ್ದಾರೆ.


ಕತ್ರಿಗುಪ್ಪೆಯಲ್ಲಿರುವ ಮನೆಯಲ್ಲಿ ಯಶ್​ ತಮ್ಮ ಸಿನಿಮಾ ಕೆರಿಯರ್​ ಆರಂಭದಿಂದಲೂ ವಾಸವಾಗಿದ್ದರು. ಆದರೆ ಕಳೆದ 2013 ರಿಂದ ಮನೆ ಮಾಲೀಕರು ಮನೆ ಬಿಟ್ಟುಕೊಡುವಂತೆ ಹೇಳಿದ್ದರೂ ಯಶ್​ ಮನೆ ಖಾಲಿ ಮಾಡಿರಲಿಲ್ಲ. ಹೀಗಾಗಿ ಮನೆ ಖಾಲಿಮಾಡಿಸುವಂತೆ ಮಾಲೀಕರು ಪೊಲೀಸರ ಮೊರೆ ಹೋಗಿದ್ದರು. ಆದರೆ ಅದು ಫಲಕಾರಿಯಾಗದ ಕಾರಣ ಮನೆ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು.


ಇತ್ತೀಚಿಗೆ ಪ್ರಕರಣದ ಕುರಿತು ಆದೇಶ ಹೊರಡಿಸಿದ್ದ ನ್ಯಾಯಾಲಯ ಮನೆಯನ್ನು ಮಾಲೀಕರಿಗೆ ಬಿಟ್ಟುಕೊಡುವಂತೆ ಯಶ್​​ ಗೆ ಆದೇಶಿಸಿತ್ತು. ಈ ಮಧ್ಯೆ ಯಶ್​ ತಾಯಿ ಮನೆಯನ್ನು ಬಿಟ್ಟು ಕೊಡಲು 6 ತಿಂಗಳ ಕಾಲಾವಕಾಶ ಕೋರಿದ್ದರು. ಇದೀಗ ನ್ಯಾಯಾಲಯದ ಆದೇಶದಂತೆ ಯಶ್​ ವಕೀಲರ ಮೂಲಕ ಮನೆ ಮಾಲೀಕರಿಗೆ ನೀಡಬೇಕಿದ್ದ 23 ಲಕ್ಷದ ಡಿಡಿ ಹಾಗೂ ಮನೆ ಕೀಗಳನ್ನು ಹಸ್ತಾಂತರ ಮಾಡುವ ಮೂಲಕ ಎಲ್ಲ ವಿವಾದಗಳಿಗೂ ತೆರೆ ಎಳೆದಿದ್ದಾರೆ.


ಕತ್ರಿಗುಪ್ಪೆಯ ನಿವಾಸಕ್ಕೆ ತೆರಳಿದ ಮೇಲೆ ಯಶ್​​ ಎಲ್ಲಾ ಚಿತ್ರಗಳು ಹಿಟ್​ ಆಗಿದ್ದರಿಂದ ಆ ಮನೆ ಯಶ್​ಗೆ ಅದೃಷ್ಟದ ಮನೆ ಎಂದು ಹೇಳಲಾಗಿತ್ತು. ಹೀಗಾಗಿ ಆ ಮನೆಯನ್ನು ಬಿಟ್ಟುಕೊಡುವುದಕ್ಕೆ ಯಶ್​ಗೆ ಮನಸ್ಸಿರಲಿಲ್ಲ. ಅಲ್ಲಿಂದ ವಾಸ್ತವ್ಯ ಬದಲಾಯಿಸಿದ್ದರೂ ಯಶ್​ ಆಮನೆಯನ್ನು ಕಚೇರಿಯಂತೆ ಬಳಸುತ್ತಿದ್ದರು. ಇದೀಗ ಮನೆ ಬಿಟ್ಟುಕೊಟ್ಟಿದ್ದಾರೆ.