ಸ್ವಾಮೀಜಿಗೆ ಕಿರಿಯ ಸ್ವಾಮೀಜಿ ಕಪಾಳ ಮೋಕ್ಷ ಮಾಡಿದ್ರಾ? ಇದು ನಡೆದಿದ್ದೆಲ್ಲಿ ಗೊತ್ತಾ?

ಇತಿಹಾಸ ಪ್ರಸಿದ್ದ ಗಡಿ ಜಿಲ್ಲೆಯ ಮಲೈ ಮಹದೇಶ್ವರ ಬೆಟ್ಟದ ಮಾದಪ್ಪನ ಮೂಲ ಸ್ಥಳ ಸಾಲೂರು ಬೃಹನ್ ಮಠದಲ್ಲೀಗ ಆಡಳಿತ ಕಚ್ಚಾಟ ನಡೆಯುತ್ತಿದ್ದು ಇದೀಗ ಬಹಿರಂಗಗೊಂಡಿದೆ.

ಸಾಲೂರು ಮಠಾಧ್ಯಕ್ಷ ಗುರುಸ್ವಾಮೀಜಿ ಮತ್ತು ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿಗಳ ನಡುವೆ ಶೀತಲ ಸಮರ ನಡೆಯುತ್ತಿದ್ದು ಇದೀಗ ಬಹಿರಂಗಗೊಂಡಿದೆ.

 

ಮಠದ ಆಡಳಿತಕ್ಕೆ ಒಳಪಟ್ಟ ಶಾಲಾ-ಕಾಲೇಜುಗಳಲ್ಲಿ ಉಪಾದ್ಯಾಯರ ನೇಮಕ, ಅಧ್ಯಾಪಕರ ನೇಮಕ, ದಾಸೋಹ ಸೇರಿದಂತೆ ಇನ್ನಿತರ ಆಡಳಿತ ವ್ಯವಸ್ಥೆಯಲ್ಲಿ ಹಿರಿಯ ಸ್ವಾಮೀಜಿ ಗುರುಸ್ವಾಮಿಜೀಯವರ ಶಿಷ್ಯಂದಿರೇ ಹೆಚ್ಚಾಗಿ ಮೇಲುಗೈ ಸಾಧಿಸುತ್ತಿದ್ದಾರೆಂದು ರೊಚ್ಚಿಗೆದ್ದ ಕಿರಿಯ ಸ್ವಾಮೀಜಿ, ಹಿರಿಯ ಸ್ವಾಮೀಜಿಗಳ ಬೆಂಬಲಿಗ ಸಂಗಮೇಶ್ ಎಂಬುವವರಿಗೆ ಕಪಾಳಮೋಕ್ಷ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಿರಿಯ ಸ್ವಾಮೀಜಿ ಮಹದೇವಸ್ವಾಮೀಜಿ ನಿವೃತ್ತ ಗ್ರಾಮಲೆಕ್ಕಾಧಿಕಾರಿ ಹಾಗೂ ಹಿರಿಯ ಸ್ವಾಮೀಜಿಯ ಶಿಷ್ಯರಾದ ಸಂಗಮೇಶ್ ಗೆ ಕಪಾಳ ಮೋಕ್ಷ ಮಾಡಿದ ವೀಡಿಯೋ ಚಿತ್ರಣ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಕಳೆದ ಗಣೇಶ ಹಬ್ಬದ ವೇಳೆಯಲ್ಲಿಯೂ ಹಿರಿಯ ಕಿರಿಯ ಸ್ವಾಮೀಜಿಗಳ ನಡುವೆ ಜಟಾಪಟಿ ನಡೆದಿದ್ದು, ಹಿರಿಯ ಸ್ವಾಮೀಜಿಗಳಿಗೆ ಕಿರಿಯ ಸ್ವಾಮೀಜಿ ಹೊಡೆದಿದ್ದಾರೆಂದು ತಿಳಿದು ಬಂದಿದ್ದು, ಸಿಸಿ ಕ್ಯಾಮರಾದ ಡಿವಿಆರ್ ಅನ್ನು ಕಿರಿಯ ಸ್ವಾಮೀಜಿ ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

 

ಒಟ್ಟಾರೆ ಮಹದೇಶ್ವರರ ಮೂಲ ಸ್ಥಳ ಸಾಲೂರು ಮಠದಲ್ಲಿ ಆಡಳಿತಕ್ಕಾಗಿ ಹಿರಿಯ-ಕಿರಿಯ ಸ್ವಾಮೀಜಿಗಳ ನಡುವೆ ಕಿತ್ತಾಟ ಈಗ ಬೀದಿಗೆ ಬಂದಂತಾಗಿದೆ.