ಚಿತ್ರರಂಗದ ಶ್ರೀದೇವಿ ಸಾವಿನ ಹಿಂದಿನ ನಿಜವಾದ ಕಾರಣಗಳೇನು ?! ಬಾಲಿವುಡ್ ಗೇ ಹೃದಯಾಘಾತ !

ಬಾಲಿವುಡ್‍ನ ಹಿರಿಯ ನಟಿ ಶ್ರೀದೇವಿ (54) ಹೃದಯಾಘಾತದಿಂದ ದುಬೈಯಲ್ಲಿ ಶನಿವಾರ ರಾತ್ರಿ ಮೃತಪಟ್ಟಿದ್ದು ಇಡೀ ಭಾರತೀಯ ಚಿತ್ರರಂಗವೇ ಹೃದಯಾಘಾತದ ನೋವಿನಲ್ಲಿದೆ.

ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತಗೊಂಡು ನಿಧನರಾಗಿದ್ದಾರೆ. ಮತ್ತೊಬ್ಬಳು ಪುತ್ರಿ ಜಾಹ್ನವಿ ದುಬೈಗೆ ತೆರಳಿರಲಿಲ್ಲ. ಸಂಬಂಧಿಕರ ವಿವಾಹ ಸಮಾರಂಭಕ್ಕೋಸ್ಕರ ದುಬೈಗೆ ಹೋಗುವುದೋ ಬೇಡವೋ ಎಂಬ ಬಗ್ಗೆ ಇಡೀ ಕುಟುಂಬ ಗೊಂದಲದಲ್ಲಿ ಇತ್ತಂತೆ. ಕೊನೆಗೆ ಹಿರಿಯ ಪುತ್ರಿಯನ್ನು ಹೊರತುಪಡಿಸಿ ಕುಟುಂಬ ಸಮೇತ ದುಬೈಗೆ ತೆರಳಲು ನಿರ್ಧರಿಸಿದರು. ದುಬೈ ತಲುಪುತ್ತಿದ್ದಂತೆ ಪ್ರಯಾಣದಿಂದ ಸುಸ್ತಾಗಿದ್ದಂತೆ ಕಂಡಿದ್ದರಂತೆ ಶ್ರೀದೇವಿ. ಪ್ರಯಾಣದ ಸುಸ್ತು ರಕ್ತದೊತ್ತಡವನ್ನು ಏರುಪೇರು ಮಾಡುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗಿರಬಹುದು. ಬಹುಶಃ ಪ್ರವಾಸ ರದ್ದುಗೊಂಡಿದ್ದರೆ ಶ್ರೀದೇವಿ ನಮ್ಮೊಂದಿಗಿರುತ್ತಿದ್ದರೋ ಏನೋ.

1963ರ ಆಗಸ್ಟ್ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ್ದ ಶ್ರೀದೇವಿ 4ನೇ ವಯಸ್ಸಿನಲ್ಲೇ ತಮಿಳಿನ ‘ತುನೈವಾನ್’ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು. 1971ರಲ್ಲಿ ಮಲೆಯಾಳಂನ ಪೂಂಪಟ್ಟಾ ಚಿತ್ರದಲ್ಲಿ ನಟಿಸಿದ್ದ ಶ್ರೀದೇವಿ ಅವರಿಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಸಿಕ್ಕಿತ್ತು. 13ನೇ ವಯಸ್ಸಿನಲ್ಲಿ ಜೂಲಿ ಚಿತ್ರದೊಂದಿಗೆ ಬಾಲಿವುಡ್‍ಗೆ ಎಂಟ್ರಿಕೊಟ್ಟ ಶ್ರೀದೇವಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿಂದಿ, ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡದಲ್ಲಿ ನಟಿಸುವ ಮೂಲಕ ಪಂಚಭಾಷಾ ಕಲಾವಿದೆಯಾಗಿ ಪ್ರಸಿದ್ಧಿ ಪಡೆದಿದ್ದರು.

 

ಕನ್ನಡದ ಭಕ್ತಕುಂಬಾರ, ಬಾಲಭಾರತ, ಹೆಣ್ಣು ಸಂಸಾರದ ಕಣ್ಣು, ಯಶೋಧ ಕೃಷ್ಣ, ಸಂಪೂರ್ಣ ರಾಮಯಣ, ಪ್ರಿಯಾದಲ್ಲಿ ನಟಿಸಿದ್ದರು. ರೆಬಲ್ ಸ್ಟಾರ್ ಅಂಬರೀಶ್, ರಜನಿಕಾಂತ್ ಜೊತೆ ಅಭಿನಯಿಸಿದ್ದ ಶ್ರೀದೇವಿ 80ರ ದಶಕದಲ್ಲಿ ಬಾಲಿವುಡ್ ಪ್ರಸಿದ್ಧ ಕಲಾವಿದೆಯಾಗಿ ಮಿಂಚಿದ್ದರು. 1995ರಲ್ಲಿ ಸಿನಿಮಾ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದ ಬಳಿಕ 15 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. 2012ರಲ್ಲಿ ‘ಇಂಗ್ಲಿಷ್ ವಿಂಗ್ಲೀಷ್’ ನಲ್ಲಿ ಅಭಿನಯಿಸುವ ಮೂಲಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದರು. 2013ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಮೂಲಕ ಶ್ರೀದೇವಿ ಅವರನ್ನು ಗೌರವಿಸಿತ್ತು. ಬಹುಭಾಷಾ ನಟಿ ಶ್ರೀದೇವಿ ನಿಧನ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ.