ಶ್ರೀದೇವಿ ಬಟ್ಟೆ ಬದಲಿಸಿದ ಪಾಡು !! ನೀರು ಕುಡಿಯಲೂ ಹೆದರುತ್ತಿದ್ದ ನಟಿ !! ಮಹಿಳಾ ದಿನಾಚರಣೆಗೆ ಚಿತ್ರರಂಗದ ಎದುರಿರುವ ಶ್ರೀದೇವಿ ಪ್ರಶ್ನೆಗಳು !!

ಬಹುಭಾಷಾ ನಟಿ ಶ್ರೀದೇವಿ ತಮ್ಮ ಅಭಿನಯ ಹಾಗೂ ಸೌಂದರ್ಯದಿಂದ ಬಾಲಿವುಡ್ ಸಿನಿಮಾರಂಗದಲ್ಲಿ ತನ್ನ ಛಾಪು ಮೂಡಿಸಿದವರು. ಆದರೆ ಅವರ ಸಿನಿ ಜರ್ನಿ ನಾವು ಪರದೆಯಲ್ಲಿ ಕಂಡಷ್ಟು ನವೀರಾಗಿಲ್ಲ.

80ರ ದಶಕದಿಂದ, ಇತ್ತೀಚಿಗಿನ ಸಿನಿಮಾದವರೆಗೂ ಅದ್ಭುತ ನಟನೆಯಿಂದ ಪ್ರೇಕ್ಷಕರ ಮನಗೆದ್ದವರು ಶ್ರೀದೇವಿ. ಚಿತ್ರರಂಗದಲ್ಲಿ ತಂತ್ರಜ್ಞಾನಗಳು ಅಷ್ಟಾಗಿ ಬಳಕೆಯಲ್ಲಿಲ್ಲದ ಕಾಲದಲ್ಲಿಯೇ ಅಮೋಘ ಅಭಿನಯ ನೀಡಿರುವ ಶ್ರೀದೇವಿ ತೆರೆಯ ಹಿಂದೆ ಎಷ್ಟೆಲ್ಲಾ ಸಮಸ್ಯೆಗಳನ್ನು ಅನುಭವಿಸಿದ್ದರು ಗೊತ್ತೆ ? ಮಾಮ್‌ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಅವರು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡಿದ್ದರು. ಅದನ್ನು ಅವರ ಬಾಯಲ್ಲೇ ಕೇಳಿ. ‘ಇಂದಿನ ನಟಿಯರಿಗೆ ಬಟ್ಟೆ ಬದಲಾಯಿಸುವ ವಾಹನ (ಕಾರಾವನ್‌) ವ್ಯವಸ್ಥೆ ಇದೆ. ಆದರೆ ನಾನು ಚಿತ್ರೀಕರಣದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಮರಗಳ ಹಿಂದೆ, ಬಸ್ಸುಗಳ ಮರೆಯಲ್ಲಿ ಬಟ್ಟೆ ಬದಲಾಯಿಸಬೇಕಾಗಿತ್ತು. ಎಷ್ಟೇ ಮುಜುಗರವಾದರೂ ಅದು ಅನಿವಾರ್ಯವಾಗಿತ್ತು. ಕಾಯಕ ನಿಷ್ಠೆ ಒಂದೆಡೆ, ಆಯಾ ದಿನದ ಚಿತ್ರೀಕರಣ ಮುಗಿಯಬೇಕು ಎಂಬ ಧಾವಂತ ಇನ್ನೊಂದೆಡೆ. ನಟಿಯ ಸಂಕಷ್ಟಗಳು ಚಿತ್ರ ತಯಾರಾಗುವ ವೇಳೆ ಪ್ರಮುಖವೇ ಅಲ್ಲ ಅನ್ನುವಂತೆ ವರ್ತಿಸುತ್ತಾರೆ. ಒಂದು ದೃಶ್ಯ ಶೂಟ್ ಆದ ಬಳಿಕ ಮತ್ತೊಂದು ಡ್ರೆಸ್ ಹಾಕಿಕೊಂಡು ಸಿದ್ದರಾಗಲೇ ಬೇಕು. ಎಲ್ಲಿ ಹೇಗೆ ಬಟ್ಟೆ ಬದಲಿಸುತ್ತಾಳೆ ಎಂಬುದು ಅವರ‌್ಯಾರಿಗೂ ಪ್ರಶ್ನೆಯಾಗಿ ಕಾಡಿದ್ದೇ ಇಲ್ಲ.”

“ನಾವು ಎದುರಿಸಿದ ಸಮಸ್ಯೆಗಳನ್ನು ನೆನಪಿಸಕೊಂಡರೂ ಈಗ ಮೈ ಜುಮ್ಮೆನ್ನುತ್ತದೆ. ಶೌಚಾಲಯದ ಸಮಸ್ಯೆಯನ್ನು ಹೇಳಲೂ ಆಗದೆ ಬಿಡಲೂ ಆಗದೆ ಒದ್ದಾಡಬೇಕಿತ್ತು. ಶೌಚಾಲಯವಿರದ ಕಾರಣ ನೀರೇ ಕುಡಿಯುತ್ತಿರಲಿಲ್ಲ. ನಿಜವಾದ ಮಳೆಯಲ್ಲಿ ಚಿತ್ರೀಕರಣ ನಡೆದರೂ ನಾವು ತುಟಿ ಪಿಟಕ್ಕೆನ್ನದೆ ಪಾಲ್ಗೊಳ್ಳುತ್ತಿದ್ದೆವು. ಇದರಿಂದಾಗಿ ಆರೋಗ್ಯ ಹಾಳಾಗಿದ್ದೂ ಇದೆ’ ಎಂದು ಶ್ರೀದೇವಿ ಹೇಳುವಾಗ ನೆರೆದವರ ಕಣ್ಣು ಮಂಜಾಗಿತ್ತು. ಇದು ಶ್ರೀದೇವಿ ಒಂದು ವರ್ಷದ ಹಿಂದೆ ಬಿಚ್ಚಿಟ್ಟ ಕತೆ. ಆದರೆ ಇಂದಿಗೂ ಪ್ರಸ್ತುತ. ಊರಾಚೆ ನಡೆಯುವ ಚಿತ್ರೀಕರಣಗಳಲ್ಲಿ ನಟರು, ನಿರ್ದೇಶಕರು, ಪುರುಷ ಕಾರ್ಮಿಕರು ಬಯಲನ್ನೇ ಶೌಚಾಲಯ ಮಾಡಿಕೊಂಡರೆ ನಟಿಯರು ಈಗಲೂ ಶೌಚಾಲಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಚಿತ್ರರಂಗದ ನಟಿಯರೂ ಸೇರಿದಂತೆ ಮಹಿಳಾ ಕಾರ್ಮಿಕರ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ.‌ ಇನ್ನು ಕೆಲವೇ ದಿನಗಳಲ್ಲಿ ಮಾರ್ಚ್ ಎಂಟರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಇದೆ. ಶ್ರೀದೇವಿ ಪ್ರಶ್ನೆಗಳಿಗೆ ಇನ್ನಾದರೂ ಚಿತ್ರರಂಗ ಉತ್ತರ ನೀಡಬೇಕಿದೆ.