ದಾನ ಕೊಡುವಾಗ ಹೇಗಿರಬಾರದು ಮನಸ್ಸು?

ಹೊನ್ನುಡಿ
{ರಾಮಾಯಣದ ಸುಭಾಷಿತಗಳ ಅವಲೋಕನ}

ದಾನ ಕೊಡುವಾಗ ಹೇಗಿರಬಾರದು ಮನಸ್ಸು?

ad

ಅಸಡ್ಡೆಯಿಂದ ಕೊಡಬಾರದು. ಅವಹೇಳನದಿಂದಲೂ ಕೊಡಬಾರದು.
ಅದು ಕೊಟ್ಟವನನ್ನೇ ನಾಶ ಮಾಡುತ್ತದೆ. – ರಾಮಾಯಣ
*
ಅಯೋಧ್ಯೆಯ ಅರಸು ದಶರಥ. ಸೂರ್ಯವಂಶದವ ಆತ. ಪರಮ ಪರಾಕ್ರಮಿ. ಅತ್ಯುತ್ತಮ ಆಡಳಿತಗಾರ. ಪ್ರಜೆಗಳನ್ನು ಮಕ್ಕಳೆಂದೇ ನೋಡಿಕೊಂಡವ. ಸಮೃದ್ಧವಾದ ರಾಷ್ಟ್ರ ಅವನದ್ದು. ಅರಮನೆಯ ಕೋಶ ತುಂಬಿತ್ತು. ಪ್ರಜೆಗಳೆಲ್ಲರೂ ಶ್ರೀಮಂತರಾಗಿದ್ದರು. ಅತ್ಯುತ್ಕೃಷ್ಟ ಸೈನ್ಯವಿತ್ತು ಅವನ ಬಳಿ. ಉತ್ತಮ ಮಂತ್ರಿಮಂಡಲವಿತ್ತು.

ಎಲ್ಲ ಇದ್ದೂ ಅವನಿಗೊಂದು ಕೊರತೆ ಇತ್ತು. ಅದು ಮಕ್ಕಳಿಲ್ಲ ಎನ್ನುವುದು. ಈ ಕೊರತೆಯ ನಿವಾರಣೆಗೆಂದು ಯಜ್ಞವೊಂದನ್ನು ಮಾಡಲು ಮುಂದಾದನವ. ಆತ ಮಾಡಲು ಹೊರಟಿದ್ದು ಅಶ್ವಮೇಧ ಯಾಗವನ್ನು.

ಯಾಗದ ನೇತೃತ್ವ ವಹಿಸಲು ಮಹರ್ಷಿ ವಸಿಷ್ಠರನ್ನು ಕೇಳಿಕೊಂಡ. ವಸಿಷ್ಠರು ಸೂರ್ಯವಂಶದ ಪುರೋಹಿತರು, ಗುರುಗಳು. ಒಪ್ಪಿದರವರು ದಶರಥನ ವಿನಂತಿಯನ್ನು. ಸಿದ್ಧತೆಗಳನ್ನು ಆರಂಭಿಸಲು ಮುಂದಾದರವರು. ಕರೆಸಿದರು ಕಾರ್ಯನಿರ್ವಹಿಸುವ ಎಲ್ಲರನ್ನು. ಅವರವರ ಕರ್ತವ್ಯಗಳನ್ನು ಸೂಚಿಸಿದರು.

ವಸಿಷ್ಠರ ಸೂಚನೆಯಂತೆ ಸಿದ್ಧತೆ ಆರಂಭವಾಯಿತು. ಕೆಲಸ ಮುಗಿಸಿದವರು ವಸಿಷ್ಠರಿಗೆ ಬಂದು ವರದಿ ನೀಡುತ್ತಿದ್ದರು. ಆ ಸಂದರ್ಭದಲ್ಲಿ ವಸಿಷ್ಠರು ಹೇಳುವ ಮಾತಿದು.

ಮಹಾಯಾಗಕ್ಕೆ ದೇಶ-ದೇಶಗಳಿಂದ ಜನರು ಬರುತ್ತಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರಿಗೆ ದಾನ ಕೊಡಬೇಕು, ಉಡುಗೊರೆ ಕೊಡಬೇಕು. ಕೊಡುವಾಗ ಪ್ರೀತಿಯಿಂದ ಕೊಡಬೇಕು, ಗೌರವದಿಂದ ಕೊಡಬೇಕು. ಅಸಡ್ಡೆಯಿಂದಲೋ, ಅವಹೇಳನದ ಬುದ್ಧಿಯಿಂದಲೋ ಕೊಡಬಾರದು. ಹಾಗೆ ಮಾಡಿದರೆ ಅದು ಕೊಟ್ಟವನಿಗೇ ಕೆಡುಕು.

*

ಅವಜ್ಞಯಾ ನ ದಾತವ್ಯಂ
ಕಸ್ಯಚಿಲ್ಲೀಲಯಾಪಿ ವಾ |
ಅವಜ್ಞಯಾ ಕೃತಂ ಹನ್ಯಾತ್
ದಾತಾರಂ ನಾತ್ರ ಸಂಶಯಃ ||

 


ವಿದ್ವಾನ್ ಜಗದೀಶಶರ್ಮಾ ಸಂಪ