ಖ್ಯಾತ ನಟ ಪ್ರಕಾಶ್ ರೈ ಮೇಲೆ ಹಲ್ಲೆಗೆ ಸಂಚು ! ಮಂಗಳೂರಿನಲ್ಲಿ ಒರ್ವನ ಬಂಧನ !!

ಸಾಹಿತಿಗಳು, ಬುದ್ದಿ ಜೀವಿಗಳ ಮೇಲೆ ನಡೆದ ದಾಳಿಗಳು ಇನ್ನೂ ನೆನಪಿನಿಂದ ಮಾಸುವ ಮೊದಲೇ ಖ್ಯಾತ ನಟ ಪ್ರಕಾಶ್ ರೈ ಮೇಲೆ ಹಲ್ಲೆಗೆ ಸಂಚು ನಡೆದಿದೆ.

ಮಂಗಳೂರಿನಲ್ಲಿ ಜಿಲ್ಲಾಡಳಿತ ನಡೆಸುವ ಕರಾವಳಿ ಉತ್ಸವದ ಉದ್ಘಾಟನೆ ಮಾಡಲು ಪ್ರಕಾಶ್ ರೈಯನ್ನು ಅಹ್ವಾನಿಸಲಾಗಿತ್ತು. ಇದನ್ನು ಬಲಪಂಥೀಯರು ವಿರೋಧಿಸಿದ್ದರು. ಆದರೆ ಜಿಲ್ಲಾಡಳಿತ ತನ್ನ ನಿರ್ಧಾರದಿಂದ ಹಿಂದೆ ಸರಿಯದೇ, ಕರಾವಳಿ ಉತ್ಸವ ಮತ್ತು ಪ್ರಕಾಶ್ ರೈಗೆ ಬಿಗು ಪೊಲೀಸ್ ಭದ್ರತೆಯನ್ನು ನೀಡಿತ್ತು.

ಪ್ರಕಾಶ್ ರೈ ಭಾಷಣ ಮುಗಿಸಿ ವಾಪಸ್ ಹೊರಡುವಾಗ ಅವರ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಲು ಸಂಚು ರೂಪಿಸಲಾಗಿತ್ತು. ಇದರ ಖಚಿತ ಮಾಹಿತಿ ಪಡೆದ ಮಂಗಳೂರು ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸಧ್ಯ ವಿಚಾರಣೆ ನಡೆಯುತ್ತಿದೆ.

ಬಹುಭಾಷಾ ನಟ ಪ್ರಕಾಶ್ ರೈ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥರನ್ನು ಟೀಕಿಸಿ ವಿವಾದಕ್ಕೆ ಒಳಗಾಗಿದ್ದರು. ಅಲ್ಲದೆ ಪ್ರಗತಿಪರ ನಿಲುವನ್ನು ಹೊಂದಿದ್ದ ಅವರ ಮಾತು ಮತ್ತು ಬರಹ ಬಲಪಂಥೀಯರ ಆಕ್ರೋಶಕ್ಕೆ ಕಾರಣವಾಗಿತ್ತು.