ಗೌರಿ ಹತ್ಯೆ ಪ್ರಕರಣ- ಮುಂದುವರಿದ ತನಿಖೆ- ಮತ್ತಿಬ್ಬರು ಹಿಂದುಸಂಘಟನೆ ಕಾರ್ಯಕರ್ತರು ಎಸ್​ಐಟಿ ವಶಕ್ಕೆ!

 

ad


ರಾಜ್ಯವನ್ನೇ ನಡುಗಿಸಿದ್ದ ಪತ್ರಕರ್ತೆ ಗೌರಿ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಪಡುಬಿದ್ರಿಯಿಂದ ಇಬ್ಬರು ಹಿಂದೂ ಕಾರ್ಯಕರ್ತರನ್ನು ಎಸ್ಐಟಿ ಪೊಲೀಸರು ವಶಕ್ಕೆ ಪಡೆದಿದ್ದು, ಗೌರಿ ಹತ್ಯೆಗೂ ಇವರಿಗೂ ಏನು ಸಂಬಂಧ ಅನ್ನೋದು ಇನ್ನಷ್ಟೆ ಸ್ಪಷ್ಟವಾಗಬೇಕಿದೆ.ಕರಾವಳಿ ಜಿಲ್ಲೆ ಉಡುಪಿಯ ಪಡುಬಿದ್ರೆಯಿಂದ ಇಬ್ಬರು ಯುವಕರನ್ನು ಎಸ್ಐಟಿ ಪೊಲೀಸರು ವಿಚಾರಣೆಗೆ ಕರೆದೊಯ್ದಿದೆ. ನಿನ್ನೆ ನಸುಕಿನ ವೇಳೆ ಪಡುಬಿದ್ರೆಗೆ ಬಂದ ಪೊಲೀಸರು, ಸ್ಥಳೀಯ ಪೊಲೀಸರ ಸಹಕಾರದಿಂದ ಯುವರಾಜ್ ಹಾಗೂ ಸಂದೇಶ ಎಂಬ ಇಬ್ಬರು ಯುವಕರನ್ನು ಕರೆದೊಯ್ದಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರಾಗಿರುವ ಇವರ ಬಂಧನ, ಸಂಘಟನೆಯ ಪ್ರಮುಖರನ್ನು ಅಚ್ಚರಿಯಲ್ಲಿ ತಳ್ಳಿದೆ.

ಹಿಂದು ಜಾಗರಣ ವದಿಕೆಯಲ್ಲಿ ನಿಧಿ ಪ್ರಮುಖ ಆಗಿದ್ದ ಯುವರಾಜ್, ವೃತ್ತಿಯಲ್ಲಿ ಸಣ್ಣ ಗುತ್ತಿಗೆದಾರ. ಈತ ಈವರೆಗೆ ಯಾವುದೇ ಅಪರಾಧಿ ಕೃತ್ಯದಲ್ಲಿ ಭಾಗಿಯಾದವನಲ್ಲ ಯುವರಾಜ್​ನನ್ನು ವಶಕ್ಕೆ ಪಡೆದಿರೋದರಿಂದ ಆತನ ವೃದ್ಧ ತಂದೆ, ತಾಯಿ ಕಣ್ಣೀರಿನಲ್ಲಿ ಮುಳುಗಿದ್ದಾರೆ.
ಬಿಟಿವಿ ಜೊತೆ ಮಾತನಾಡಿದ ಆತನ ಹೆತ್ತವರು ನಮ್ಮ ಮಗ ನಿರಪರಾಧಿ, ವಿಚಾರಣೆಗೆ ಬಂದ ಪೊಲಿಸರು, ನಮ್ಮ ಮಗನನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಕೂಡಲೇ ಮಗನನ್ನು ಮನೆಗೆ ವಾಪಾಸು ಕಳುಹಿಸಿ ಎಂದು ಕಣ್ಣೀರಿಡುತ್ತಿದ್ದಾರೆ. ಇನ್ನೋರ್ವ ಸಂದೇಶ ಹಿಂದು ಜಾಗರಣ ವೇದಿಕೆಯ ತಾಲೂಕು ಸಹ ಸಂಯೋಜಕನಾಗಿದ್ದು, ಹಾಲಿನ ಡೈರಿ ನಡೆಸುತ್ತಿದ್ದವನು. ಆತನನ್ನು ಡೈರಿಯಿಂದಲೇ ಎಸ್ ಐ ಟಿ ತಂಡ ಕರೆದೊಯ್ದಿದ್ದು, ವಶಕ್ಕೆ ಪಡೆದ ಮನೆಯವರಿಗೆ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಗೌರಿ ಲಂಕೇಶ್ ಹತ್ಯೆಯಲ್ಲಿ ಇವರ ಪಾತ್ರ ಏನು? ಆರೋಪಿಗಳಿಗೆ ಆಶ್ರಯ ಕೊಟ್ಟವರೇ ಅಥವಾ ಈ ಸಂಚಿನಲ್ಲಿ ಭಾಗಿಯಾಗಿದ್ದರೇ ಎನ್ನುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ಆದರೆ ಈ ಅನಿರೀಕ್ಷಿತ ಕಾರ್ಯಾಚರಣೆ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.