ಇನ್ನೇನು ಆಕೆ ಸಪ್ತಪದಿ ತುಳಿಯಬೇಕಾಗಿತ್ತು. ಆಗಲೇ ಎದುರಾದ ಭಗ್ನಪ್ರೇಮಿ!! ಮುಂದೇನಾಯ್ತು?

ಸಪ್ತಪದಿ ತುಳಿಯಬೇಕಾಗಿದ್ದ ವಧುವಿನ ಮೇಲೆ ಭಗ್ನ ಪ್ರೇಮಿಯೊಬ್ಬನು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದ ಸಾಗರ ತಾಲೂಕಿನಲ್ಲಿ ನಡೆದಿದೆ.

ಹಸೆ ಮಣೆ ಏರಿದ್ದ ಯುವತಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಸಾಗರ ತಾಲೂಕಿನ ಗೆಣಸಿನಕುಣಿ ಗ್ರಾಮದ ಮದುವೆ ಮನೆಯಲ್ಲಿ ಹೊಸನಗರ ತಾಲೂಕಿನ ಬಸವನ ಗುಂಡಿಯ ಗೀತಾ ಮತ್ತು ಭರತ್ ನವ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದರು. ಈ ವೇಳೆ ನಂದನ್ ಅಲಿಯಾಸ್ ಮೋಹನ್ ಎಂಬಾತ ಏಕಾಏಕಿ ಮದುವೆ ಮನೆ ಪ್ರವೇಶ ಮಾಡಿ ದಾಂಧಲೆ ಮಾಡಿದ್ದು ಅಷ್ಟೇ ಅಲ್ಲದೆ ವದುವಿನ ಮೇಲೆ ಹಲ್ಲೆ ನಡೆಸಿದ್ದಾನೆ.

ಘಟನೆಯಲ್ಲಿ ಹುಡುಗಿ ಮಾವ ಸ್ವಾಮಿಗೌಡ ಎಂಬುವರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯುವತಿಗೆ ಸಾಗರದಲ್ಲಿ ಬೇರೆ ಮದುವೆ ಫಿಕ್ಸ್ ಆದ ಹಿನ್ನೆಲೆಯಲ್ಲಿ ಹತಾಶೆಗೊಂಡ ಯುವಕ ಈ ರೀತಿ ಹಲ್ಲೆ ನಡೆಸಿದ್ದಾನೆ. ಈತ ಶಿವಮೊಗ್ಗದ ಹೊಸಮನೆ ನಿವಾಸಿಯಾಗಿದ್ದಾನೆ.

ನಗರದ ಅರಸ್ ವೆಜ್​ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ಗೀತಾ ಮೇಲೆ ಈತ ಕಣ್ಣು ಹಾಕಿದ್ದನು. ಸರಿ ಸುಮಾರು 6 ತಿಂಗಳ ಹಿಂದಿನಿಂದ ಪರಿಚಯವಿತ್ತು ಎಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.