ವಂಚನೆಗೂ ಜಿಎಸ್ ಟಿ ಪಾವತಿಸಿದ ಯುವತಿ !! ಆನ್ ಲೈನ್ ವರನಿಂದ ಮೋಸ !!

ವರನಿಗಾಗಿ ಜೀವನ್ ಸಾಥಿ ಎಂಬ ವೆಬ್ ಸೈಟಿನಲ್ಲಿ ಹೆಸರು ನೊಂದಾಯಿಸಿದ ಯುವತಿಯೊಬ್ಬಳು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾಳೆ.

ಕೋರಮಂಗಲದ 29 ವರ್ಷದ ಯುವತಿ ಮದುವೆಯಾಗಲು ವರನಿಗಾಗಿ ಜೀವನ್ ಸಾಥಿ ಡಾಟ್ ಕಾಮ್ ನಲ್ಲಿ ಹೆಸರು ನೊಂದಾಯಿಸಿದ್ದಳು.

ಜೀವನ್ ಸಾಥಿ ಡಾಟ್ ಕಾಮ್ ನಲ್ಲಿ ಹೆಸರು ನೊಂದಾಯಿಸಿದ್ದ ಮಹಮ್ಮದ್ ಅಬ್ದುಲ್ ಎಂಬಾತ ತಾನು ಅನಿವಾಸಿ ಭಾರತೀಯ ಎಂದು ಯುವತಿಗೆ ಪರಿಚಯಿಸಿಕೊಂಡಿದ್ದ. ಭಾರತ ಮೂಲದ ನಾನು ಅಮೇರಿಕಾದ ನ್ಯೂ ಜೆರ್ಸಿಯಲ್ಲಿ ಕೆಲಸ ಮಾಡುತ್ತಿದ್ದು ಮದುವೆಯಾಗುವುದಾಗಿ ನಂಬಿಸಿದ್ದ.

ಪದೇ ಪದೇ ಕರೆ ಮಾಡಿ ಮಾತನಾಡುತ್ತಿದ್ದ ಮಹಮ್ಮದ್ ಅಬ್ದುಲ್ ನನ್ನು ಯುವತಿ ನಂಬಿದ್ದಳು. ಆಗಸ್ಟ್ 13 ರಂದು ಕರೆ ಮಾಡಿದ್ದ ಮಹಮದ್ ಅಬ್ದುಲ್, ಸರ್ಪ್ರೈಸ್ ಗಿಫ್ಟ್ ಕಳುಹಿಸುವುದಾಗಿ ಹೇಳಿದ್ದ. ಭಾವಿ ಗಂಡನ ಸರ್ಪ್ರೈಸ್ ಗಿಫ್ಟ್ ಗಾಗಿ ಯುವತಿ ಶಬರಿಯಂತೆ ಕಾದಿದ್ದಳು.

ವಾರದ ನಂತರ ಯುವತಿಯ ಮೊಬೈಲ್ ಗೆ ಕೊರಿಯರ್ ಏಜೆನ್ಸಿಯವರೆಂದು ಹೇಳಿಕೊಂಡು ಯುವತಿಯೊಬ್ಬಳು ಕರೆ ಮಾಡಿದ್ದಳು.

ತಮ್ಮ ವಿಳಾಸಕ್ಕೆ 18,000ಯುಎಸ್(11.62 ಲಕ್ಷ) ಡಾಲರ್ ಹಣ ಕೊರಿಯರ್ ಬಂದಿರುವುದಾಗಿ ಹೇಳಿದ್ದಳು. ಆದರೆ ಹಣ ಪಡೆಯಲು ಶೇಕಡಾ 18ರಷ್ಟು ಜಿ.ಎಸ್.ಟಿಯನ್ನು ಮುಂಗಡವಾಗಿ ಪಾವತಿಸುವಂತೆ ಅಪರಿಚಿತ ಯುವತಿ ಹೇಳಿದ್ದನ್ನು ನಂಬಿ ಆಕೆ ಹೇಳಿದ ಖಾತೆ ಸಂಖ್ಯೆಗೆ 2.9 ಲಕ್ಷ ರೂಪಾಯಿ ಪಾವತಿಸಿದ್ದಳು.

ನಂತರ ಮತ್ತೆ ಏಜೆನ್ಸಿ‌ ಕಡೆಯಿಂದ 2.11ಲಕ್ಷ ಪಾವತಿಸುವಂತೆ ಕೇಳಿದ್ದಾಗ ಅನುಮಾನಗೊಂಡ ಯುವತಿ, ಪುನಃ ಅದೇ ನಂಬರ್ ಗೆ ಕರೆ ಮಾಡಿದಾಗ ಏಜೆನ್ಸಿ‌ ನಂಬರ್ ಸ್ವಿಚ್‌ಆಫ್ ಆಗಿತ್ತು. ಅನುಮಾನಗೊಂಡ ಯುವತಿ ವೆಬ್ ಸೈಟ್ ನಲ್ಲಿ ಪರಿಶೀಲಿಸಿದಾಗ ಅಬ್ದಲ್ ತನ್ನ ಖಾತೆ ನಿಷ್ಕ್ರಿಯಗೊಳಿಸಿದ್ದ. ನಂತರ ತಾನು ಮೋಸ‌ಹೋಗಿರುವುದು ಯುವತಿಗೆ ಗೊತ್ತಾಗಿದೆ.

ಸದ್ಯ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಯುವತಿಯಿಂದ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.