ಬೆಳ್ಳಂಬೆಳಗ್ಗೆ ರೌಡಿಶೀಟರ್ ಮೇಲೆ ಫೈರಿಂಗ್!!

ಬೆಂಗಳೂರಿನಲ್ಲಿ ಮತ್ತೆ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು ಕೇಳಿಬಂದಿದೆ. ನಿನ್ನೆ ಬನಶಂಕರಿ ಸುತ್ತಮುತ್ತಲಿನ ಎಕೆಕಾಲೋನಿ,ಯಡಿಯೂರ ಲೇಕ್ ಬಳಿ ದಾಂಧಲೆ ಎಬ್ಬಿಸಿದ್ದ ರೌಡಿಶೀಟರ್​​​ ಭೋಜ್ ಅಲಿಯಾಸ್ ವಿಷ್ಣು ಮೇಲೆ ಪೊಲೀಸರು ಗುಂಡಿನ ರುಚಿ ತೋರಿಸಿದ್ದು, ಗುಂಡೇಟಿನಿಂದ ಗಾಯಗೊಂಡಿರುವ ಭೋಜ್​ನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ಕುಡಿದ ಮತ್ತಿನಲ್ಲಿದ್ದ ರೌಡಿ ಭೋಜ್​ ಯಡಿಯೂರು ಸುತ್ತಮುತ್ತಲಿನ ಏರಿಯಾಗಳಲ್ಲಿ 15 ಕ್ಕೂ ಹೆಚ್ಚು ಕಾರಿನ ಗಾಜು ಪುಡಿ-ಪುಡಿ ಮಾಡಿ ದಾಂಧಲೆ ಎಬ್ಬಿಸಿದ್ದ. ಅಷ್ಟೇ ಅಲ್ಲದೇ ಈತನ ಕೃತ್ಯ ಪ್ರಶ್ನಿಸಿದ ಸ್ಥಳೀಯರಾದ ಆನಂದ್ ಹಾಗೂ ನೂತನ ಗೌಡರ್ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ. ಪ್ರಕರಣ ದಾಖಲಿಸಿಕೊಂಡ ಬನಶಂಕರಿ ಪೊಲೀಸರು ಈತನನ್ನು ಬಂಧಿಸುವ ಪ್ರಯತ್ನ ಮಾಡಿದ್ದರು.

ಈ ಹಿಂದೆ ಕೂಡಾ ಇದೇ ರೀತಿ ಕೃತ್ಯದಲ್ಲಿ ಪಾಲ್ಗೊಂಡಿದ್ದ ಭೋಜ್ ನ ಮೇಲೆ ಈಗಾಗಲೇ ಎರಡು ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳಿವೆ. ನಿನ್ನೆ ತಡರಾತ್ರಿಯಿಂದ ಪೊಲೀಸರು ಭೋಜ್​ನನ್ನು ಬಂಧಿಸುವ ಕಾರ್ಯಾಚರಣೆ ಆರಂಭಿಸಿದ್ದರು. ಮುಂಜಾನೆ ವೇಳೆ ಬಂಧಿಸುವ ವೇಳೆ ಕುಡಿದ ಮತ್ತಿನಲ್ಲಿದ್ದ ಭೋಜ್ ಇನ್ಸಪೆಕ್ಟರ್​ ಶೇಖರ್ ಮೇಲೆ ಹಲ್ಲೆಗೆ ಮುಂಧಾಗಿದ್ದ. ಹೀಗಾಗಿ ಆತ್ಮರಕ್ಷಣೆಗಾಗಿ ಇನ್ಸ್ ಪೆಕ್ಟರ್ ಶೇಖರ್ ರಿಂದ ರಿವಾಲ್ವಾರ್ ನಿಂದ ಭೋಜನ ಮೇಲೆ ಫೈರಿಂಗ್ ಮಾಡಿದ್ದಾರೆ. ಇನ್ಸಪೆಕ್ಟರ್ ಎರಡು ಗುಂಡು ಹಾರಿಸಿದ್ದು, ಒಂದು ಗುಂಡು ಭೋಜ್​​ನ ಎಡಗಾಲು ಸೇರಿದೆ. ಇದೀಗ ಭೋಜ್​​ನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ದಾಂಧಲೆ ಎಬ್ಬಿಸಿದ್ದ ರೌಡಿಶೀಟರ್ ಗೆ ಗುಂಡೆಟು ನೀಡುವ ರೌಡಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.