ಟಿಕೇಟ್​ ಕೊಡದೇ ನನ್ನ ಮೇಲೆ ಬಿಎಸ್​ವೈ ಸೇಡು ತೀರಿಸಿಕೊಂಡ್ರು- ಮಾಜಿ ಸಚಿವ ಬೆಳಮಗಿ ಆಕ್ರೋಶ!

ಬಿಜೆಪಿ ಅಂತಿಮ ಲಿಸ್ಟ್​ ಹೊರಬೀಳುತ್ತಿದ್ದಂತೆ ಆಕ್ರೋಶ ಭುಗಿಲೆದ್ದಿದೆ. ಕಲಬುರಗಿಯ ಬಿಜೆಪಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಮಾಜಿ ಸಚಿವ ರೇವುನಾಯಕ ಬೆಳಮಗಿ ಕೈತಪ್ಪಿದ್ದು, ಬೆಳಮಗಿ ಸೇರಿದಂತೆ ನೂರಾರು ಕಾರ್ಯಕರ್ತರು ಬಿಜೆಪಿ ಹೈಕಮಾಂಡ್​ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಕಲಬುರಗಿಯ ಉದನೂರು ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ನೂರಾರು ಕಾರ್ಯಕರ್ತರು ಬಿಜೆಪಿ ನಾಯಕರು ಹಾಗೂ ಬಿಎಸ್​ವೈ-ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಎಸ್​ವೈ ಹಾಗೂ ಶೋಭಾ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಬಿಟಿವಿನ್ಯೂಸ್​ ಜೊತೆ ಮಾತನಾಡಿದ ಮಾಜಿ ಸಚಿವ ರೇವೂ ನಾಯಕ ಬೆಳಮಗಿ, ಕೇಂದ್ರ ನಾಯಕರು ಗ್ರಾಮೀಣ ಕ್ಷೇತ್ರಕ್ಕೆ ನನ್ನ ಹೆಸರೇ ಅಂತಿಮಗೊಳಿಸಿದರು ಸಹ, ಅಂದು ನಾನು ಬಿಎಸ್​ವೈ ಜೊತೆ ಕೆಜೆಪಿಗೆ ಹೋಗದಿದ್ದಕ್ಕೆ, ಇಂದು ಯಡಿಯೂರಪ್ಪ ನನ್ನ ವಿರುದ್ದ ಹಗೆತನ ಸಾಧಿಸಿ ಟಿಕೆಟ್ ಕೈತಪ್ಪಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಗ್ರಾಮೀಣ ಕ್ಷೇತ್ರದಲ್ಲಿ ಪಕ್ಷವನ್ನ ಬೇರುಮಟ್ಟದಿಂದ ಗಟ್ಟಿಗೊಳಿಸಿದ್ದೇನೆ.. ಸಭೆಯಲ್ಲಿ ಬೆಂಬಲಿಗರು ಏನು ಹೇಳುತ್ತಾರೋ ಅದನ್ನ ಕೇಳುತ್ತೇನೆ. ಕಾರ್ಯಕರ್ತರ ನಿರ್ಧಾರವೇ ನನ್ನ ಕೊನೆಯ ನಿರ್ಧಾರ ಎಂದರು. ಇನ್ನು ಬೆಳಮಗಿ ಟಿಕೇಟ್​ ತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರ ಪುತ್ರಿ ಸುನೀತಾ, ನನ್ನ ತಂದೆಯ ಟಿಕೇಟ್​ ತಪ್ಪುವುದಕ್ಕೆ ಯಡಿಯೂರಪ್ಪನವರೇ ನೇರ ಕಾರಣ. ಬಸವರಾಜ ಮತ್ತಿಮೂಡರಿಂದ ಹಣ ಪಡೆದು ಟಿಕೇಟ್ ನೀಡಲಾಗಿದೆ ಎಂದು ಆರೋಪಿಸಿದರು. ಒಟ್ಟಿನಲ್ಲಿ ರೇವು ಬೆಳಮಗಿ ಬಂಡಾಯ ಬಿಜೆಪಿ ಪಾಲಿಗೆ ಬಿಸಿತುಪ್ಪವಾಗಿರೋದಂತು ನಿಜ.