ಚುನಾವಣಾ ಕುರುಕ್ಷೇತ್ರ 2018 ಮಸ್ಕಿ (ರಾಯಚೂರು ಜಿಲ್ಲೆ)

ಮಸ್ಕಿ ವಿಧಾನಸಭಾ ಕ್ಷೇತ್ರ

ad


ಈಗ ನಾವು ಹೇಳ್ತಾ ಇರೋ ಕ್ಷೇತ್ರ ಮಸ್ಕಿ ವಿಧಾನಸಭಾ ಕ್ಷೇತ್ರ. ಸದ್ಯ ಇಲ್ಲಿ ಕಾಂಗ್ರೆಸ್ ಪ್ರತಾಪ್ ಗೌಡ ಪಾಟೀಲ್ ಶಾಸಕರಾಗಿದ್ದಾರೆ. ಹಾಗಿದ್ರೆ ಈ 2018ರ ಸಮರಕ್ಕೆ ಕ್ಷೇತ್ರ ಹೇಗೆ ಸಜ್ಜಾಗಿದೆ ಇಲ್ಲಿನ ಗ್ರೌಂಡ್ ರಿಯಾಲಿಟಿ ಏನು ನೋಡೋಣ ಬನ್ನಿ

        

 

ಮಸ್ಕಿ ವಿಧಾನಸಭಾ ಕ್ಷೇತ್ರ. ರಾಯಚೂರು ಜಿಲ್ಲೆಯಲ್ಲಿರೋ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಎಸ್ಟಿ ಮೀಸಲು ಕ್ಷೇತ್ರವಾಗಿರೋ ಇದೂ ಒಂದು. ರಾಯಚೂರು ಜಿಲ್ಲೆಯಲ್ಲಿಯೇ ಮಸ್ಕಿ ಪಟ್ಟಣಕ್ಕೆ ವಿಶೇಷವಾದ ಸ್ಥಾನ ಮಾನ ಇದೆ. ಒಂದು ಕಾಲದಲ್ಲಿ ಇಡಿ ದೇಶವೇ ಮಸ್ಕಿ ಪಟ್ಟಣದತ್ತ ತಿರುಗಿ ನೋಡಿದಂತಹ ಇತಿಹಾಸ ಸಾಮ್ರಾಟ ಅಶೋಕ ಚಕ್ರವರ್ತಿಯ ಸಾಮ್ರಾಜ್ಯಕ್ಕೆ ಒಳಪಟ್ಟಿದ್ದ ಈ ಪಟ್ಟಣಕ್ಕಿದೆ. ದೇಶದ ಇತಿಹಾಸಕಾರರು ದೇವನಾಂ ಪ್ರೀಯ ಅನ್ನೋ ನಾಮಾಕಿಂತ ಯಾರದು ಎನ್ನುವ ಜಿಜ್ಞಾಸೆಯಲ್ಲಿರುವಾಗ, ಅದು ಅಶೋಕನ ಬಿರುದು ಎಂದು ದಾಖಲೆ ಸಮೇತ ಹೇಳಿದ ಶಾಸನ ಇದೇ ಮಸ್ಕಿ ಪಟ್ಟಣದಲ್ಲಿ ದೊರೆತಿತ್ತು. ಅಷ್ಟೇ ಅಲ್ಲ ಈ ಕ್ಷೇತ್ರದಲ್ಲಿ ಇತ್ತೀಚಿಗೆ ನವ ಶೀಲಾಯುಗದ ಪಳಯುಳಿಕೆಗಳು ಸಿಕ್ಕು ಮತ್ತೊಮ್ಮೆ ದೇಶದ ಇತಿಹಾಸಕಾರರು ಮಸ್ಕಿಯತ್ತ ತಿರುಗಿ ನೋಡುವಂತ್ತೆ ಮಾಡಿತ್ತು. ಅದೇ ರೀತಿಯಾಗಿ ಭೂ ಗರ್ಭದಲ್ಲಿ ಚಿನ್ನದ ನಿಕ್ಷೇಪವನ್ನು ಹೊಂದಿರುವಂತಹ ಕ್ಷೇತ್ರ ಕೂಡಾ ಹೌದು. ಇಷ್ಟೆಲ್ಲಾ ಹಿರಿಮೆಯನ್ನು ಹೊಂದಿರೋ ಈ ಕ್ಷೇತ್ರದಲ್ಲಿ ರಾಜಕೀಯ ಕೂಡಾ ಸದ್ದು ಮಾಡ್ತಿದೆ. 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ಆದಾಗ ಲಿಂಗಸಗೂರು, ಸಿಂದನೂರು ಹಾಗೂ ಮಾನ್ವಿ ಕ್ಷೇತ್ರದ ಕೆಲ ಭಾಗಗಳನ್ನು ಸೇರಿಸಿ ಮಸ್ಕಿ ಕ್ಷೇತ್ರ ರೂಪಿಸಲಾಯ್ತು. ಇಲ್ಲಿ ನಡೆದ 2 ಚುನಾವಣೆಯಲ್ಲೂ ಪ್ರತಾಪ್ ಗೌಡ ಪಾಟೀಲ್ ಗೆದ್ದಿದ್ದಾರೆ.2008ರಲ್ಲಿ ಬಿಜೆಪಿಯಿಂದ ಗೆದ್ರೆ 2013ರಲ್ಲಿ ಕಾಂಗ್ರೆಸ್ ನಿಂದ ನಿಂತು ಗೆದ್ದಿದ್ದಾರೆ. ಈಗ ಈ ಕ್ಷೇತ್ರ 3 ನೇ ಚುನಾವಣೆಯನ್ನು ಎದುರು ನೋಡ್ತಿದೆ. ಹಾಗಿದ್ರೆ ಇಲ್ಲಿನ ಈಗಿನ ಸ್ಥಿತಿ ಗತಿ ಏನು ಅನ್ನೋದನ್ನು ಹೇಳ್ತೀವಿ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ.

 

2013ರ ಮತಬರಹ

ಇದು 2013ರ ಮತಬರಹ. ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಪ್ರತಾಪ್ ಗೌಡ ಪಾಟೀಲ್ 45552 ಮತಗಳನ್ನು ಪಡೆಯೋದ್ರ ಮೂಲಕ ಗೆದ್ದು ಶಾಸಕರಾದ್ರು, ಇನ್ನು ಅವ್ರಿಗೆ ಪೈಪೋಚಿ ನೀಡಿದ ಕೆಜೆಪಿಯ ಮಹದೇವಪ್ಪ ಗೌಡ 26405 ಮತಗಳನ್ನು ಪಡೆದು ಸೋತ್ರು.

 

ಅಂದ್ಹಾಗೆ ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಘೋಷಣೆ ಮಾಡಿದ ನೂತನ ತಾಲ್ಲೂಕುಗಳಲ್ಲಿ ಮಸ್ಕಿ ತಾಲ್ಲೂಕು ಸಹ ಒಂದು. ಮಸ್ಕಿ ತಾಲೂಕು ಆಗಬೇಕು ಅಂತಾ ಇಲ್ಲಿನ ಜನ ಸುದೀರ್ಘವಾದ ಹೋರಾಟವನ್ನೂ ಮಾಡಿದ್ರು. ಕೊನೆಗೂ ಸಿಎಂ ಸಿದ್ದರಾಮಯ್ಯನವರು ಮಸ್ಕಿಯನ್ನು ತಾಲೂಕಾಗಿ ಘೋಷಿಸಿದ್ರು. ಇದು ಇಲ್ಲಿನ ಜನರಿಗೆ ಖುಷಿ ಕೊಡೋ ವಿಚಾರ. ಹಾಗಂದ ಮಾತ್ರಕ್ಕೆ ಮತ್ತೆ ಕಾಂಗ್ರೆಸ್ ನ ಪ್ರತಾಪ್ ಗೌಡರನ್ನೇ ಗೆಲ್ಲಿಸೋದಕ್ಕೇನೂ ಇಲ್ಲಿನ ಜನ ಮುಂದಾಗಿಲ್ಲ. ಯಾಕಂದ್ರೆ ತುಂಗಾಭದ್ರ ನದಿಯ ನೆಲೆ ಬೀಡು, ವಾಣಿಜ್ಯ ಪಟ್ಟಣವೂ ಆಗಿರೋ ಮಸ್ಕಿ ಆರ್ಥಿಕವಾಗಿ ಸದೃಡವಾಗಿದ್ರೂ ಹೇಳುವಂತ ಅಭಿವೃದ್ಧಿ ಕೆಲ್ಸಗಳು ಇಲ್ಲಿ ನಡೆದಿಲ್ಲ. ಹಾಗಾಗಿ ಜನ ಯೋಚಿಸಿ ಮತಚಲಾಯಿಸೋದ್ರಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾನೇರ ಹಣಾಹಣಿ ಇಲ್ಲಿ ಏರ್ಪಡೋದ್ರಲ್ಲಿ ಅನುಮಾನ ಇಲ್ಲ. ಇಲ್ಲಿನ ಮತ್ತೊಂದಷ್ಟು ರಾಜಕೀಯ ವಿಚಾರಗಳನ್ನು ಹೇಳೋಕು ಮೊದಲು ಯಾರ್ಯಾರು ಚುನಾವಣಾ ಅಖಾಡದಲ್ಲಿರ್ತಾರೆ ನೋಡೋಣ

ಕೈ ಅಭ್ಯರ್ಥಿ

ಅಂದ್ಹಾಗೆ ಕಾಂಗ್ರೆಸ್ ಶಾಸಕರಾಗಿರೋ ಪ್ರತಾಪ್ ಗೌಡ ಪಾಟೀಲ್ ಇಲ್ಲಿಂದ ಮತ್ತೆ ಕಾಂಗ್ರೆಸ್ ನಿಂದ ಕಣಕ್ಕಿಳಿಯೋದು ಪಕ್ಕಾ. ಅವ್ರು ಈ ಹಿಂದೆ 2008ರಲ್ಲಿ ಬಿಜೆಪಿಯಿಂದ ಹಾಗೂ 2013ರಲ್ಲಿ ಕಾಂಗ್ರೆಸ್ ನಿಂದ ನಿಂತು ಗೆದ್ದಿದ್ದಾರೆ. ಹಾಗಾಗಿ ಕ್ಷೇತ್ರದ ಜನ ಪ್ರತಾಪ್ ಗೌಡ ಪಾಟೀಲ್ ಅಧಿಕಾರಕ್ಕಾಗಿ ಪಕ್ಷ ಬದಲಾಯಿಸ್ತಾರೆ ಅನ್ನೋ ಆರೋಪ ಮಾಡ್ತಿದ್ದಾರೆ. ಇನ್ನು ಕ್ಷೇತ್ರಕ್ಕೆ ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಅನುದಾನ ಹರಿದು ಬಂದ್ರೂ ಅಭಿವೃದ್ದಿ ಮಾತ್ರ ಆಗಿಲ್ಲ. ಇಲ್ಲಿಯ ಜನ ಈಗಲೂ ಕುಡಿಯಲು ನೀರಿಲ್ಲದೆ ಪರಿತಪಿಸುತ್ತಾರೆ. ಎಷ್ಟೋ ಗರ್ಭಿಣಿಯರಿಗೆ ಆಸ್ಪತ್ರೆಗೆ ತಲುಪುವ ಮುನ್ನವೆ ರಸ್ತೆಯಲ್ಲಿಯೇ ಹೆರಿಗೆ ಆದ ಉದಾಹರಣೆ ಇದೆ ಅಂದ ಮೇಲೆ ಇಲ್ಲಿನ ರಸ್ತೆಗಳ ಬಗ್ಗೆ ಹೇಳಬೇಕಾಗಿಲ್ಲ. ಇದು ಒಂದ್ಕಡೆ ಆದ್ರೆ ಎರಡನೇ ಬಾರಿಗೆ ಶಾಸಕರಾಗಿರುವ ಪ್ರತಾಪಗೌಡ ಪಾಟೀಲ್, ಪರ್ಸಂಟೇಜ್ ಶಾಸಕರೆಂದೆ ಕುಖ್ಯಾತಿಯನ್ನ ಹೊಂದಿದ್ದಾರಂತೆ. ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ನಡೆದರು ಶಾಸಕರಿಗೆ ಇಂತಿಷ್ಟು ಪರ್ಸಂಟೇಜ್ ಕೊಡಬೇಕಂತೆ ಇಲ್ದಿದ್ರೆ ಕಾಮಗಾರಿ ನಡೆಯೋದೇ ಇಲ್ಲ ಅನ್ನೋ ಮಾತುಗಳು ಕೇಳಿ ಬಂದಿವೆ. ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡ ಯೋಜನೆಗಳಲ್ಲಿ ಶಾಸಕರು ಪರ್ಸಂಟೇಜ್ ತೆಗೆದುಕೊಂಡಿದ್ದಾರಂತೆ ಈ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆದಲ್ಲಿ ಶಾಸಕರ ಪ್ರಾಮಾಣಿಕತೆ ಕ್ಷೇತ್ರದ ಜನತೆಗೆ ಗೊತ್ತಾಗಲಿದೆ ಅಂತಿದ್ದಾರೆ ಇಲ್ಲಿನ ಮತದಾರರು. ಇನ್ನು ಶಾಸಕರ ಮೇಲಿರೋ ಭ್ರಷ್ಟಾಚಾರದ ಆರೋಪ ಇಲ್ಲಿಗೆ ಮುಗಿಯುವುದಿಲ್ಲ. ರೈತರಿಗೆ ಅನುಕೂಲವಾಗ ಬೇಕಿದ್ದ ಗಂಗಾ ಕಲ್ಯಾಣ ಯೋಜನೆಯಲ್ಲೂ ಪರ್ಸಂಟೇಜ್ ಪಡೆದುಕೊಂಡಿದ್ದಾರಂತೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಹಳ್ಳ ಹಿಡಿದು ಹೋಗಿವೆ. ಕ್ಷೇತ್ರದಲ್ಲಿ ಹಳ್ಳಿಗಳ ಸಂಪರ್ಕ ರಸ್ತೆಗಳು ಇವತ್ತಿಗೂ ಡಾಂಬರೀಕರಣ ಗೊಂಡಿಲ್ಲ. ಚರಂಡಿ ವ್ಯವಸ್ತೆ ಇಲ್ಲದೆ ದುರ್ವಾಸನೆ ಹೊಡೆಯುತ್ತಿವೆ. ವಸತಿ ಹೀನರಿಗಾಗಿ ಗ್ರಾಮ ಪಂಚಾಯತ್ ಗಳಿಗೆ ಬಂದಂತಹ ಮನೆಗಳನ್ನ ಶಾಸಕರು ತಮ್ಮ ಹಿಂಬಾಲಕರಿಗೆ ಕೊಡಿಸಿದ್ದಾರೆ ಎನ್ನುವ ಗಂಭೀರ ಆರೋಪಗಳು ಇವ್ರ ಮೇಲಿದ್ದು ಈ ಬಾರಿ ಮತ್ತೆ ಪ್ರತಾಪ್ ಗೌಡ ಪಾಟೀಲ್ ಗೆಲ್ಲೋದು ಅನುಮಾನ ಅಂತಿದ್ದಾರೆ ಇಲ್ಲಿನ ಜನ

ಬಿಜೆಪಿ ಅಭ್ಯರ್ಥಿ

ಈ ಬಾರಿ ಭಾರತೀಯ ಜನತಾ ಪಕ್ಷದಿಂದ ಮಸ್ಕಿ ಮಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯೋದಕ್ಕೆ ಆರ್ ಬಸವನಗೌಡ ತುರುವಿಹಾಳ ಅವರಿಗೆ ಟಿಕೇಟ್ ಸಿಗುವ ಎಲ್ಲಾ ಸಾಧ್ಯತೆಗಳು ಇವೆ. ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿರುವ ಬಸವನಗೌಡ ತುರುವಿಹಾಳ, ಪಕ್ಷದ ಕಾರ್ಯಕರ್ತರನ್ನ ಸಂಘಟನಾತ್ಮಕವಾಗಿ ಕರೆದುಕೊಂಡು ಹೋಗ್ತಿದ್ದಾರೆ. ಇವರು ಈ ಹಿಂದೆ ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವವನ್ನ ಹೊಂದಿದ್ದಾರೆ. ಅಷ್ಟೇ ಅಲ್ಲ ಇವರ ತಂದೆ ಸಹ ಈ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು, ಇವರ ಸೊಸೆ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾರೆ. ರಾಜಕೀಯವಾಗಿ ನೋಡಿದಾಗ ತುಂಬಾ ಸ್ಟ್ರಾಂಗ್ ಇದ್ದಾರೆ. ಇನ್ನು ಇವ್ರು ಜಿಲ್ಲಾ ಪಚಾಯತ್ ಸದಸ್ಯರಾಗಿದ್ದಾಗ ಸಾಕಷ್ಟು ಅಭಿವೃದ್ದಿ ಯೋಜನೆಗಳನ್ನ ಕೈಗೊಂಡಿದ್ದಾರೆ. ತುರುವಿಹಾಳ ಜಿ.ಪಂ ಕ್ಷೇತ್ರದಲ್ಲಿ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ, ರೈತರ ಅನುಕೂಲಕ್ಕಾಗಿ ಕೆರೆಗಳ ಅಭಿವೃದ್ದಿಯನ್ನೂ ಇವ್ರು ಕೈ ಗೊಂಡಿದ್ದರು. ಸ್ವತಃ ಕೃಷಿಯಲ್ಲಿ ಹೆಚ್ಚು ಆಸಕ್ತಿ ಇರೋ ಬಸವನಗೌಡ ತುರುವಿಹಾಳ ರೈತರಿಗಾಗಿ ಸರಕಾರದ ಸಾಕಷ್ಟು ಯೋಜನೆಗಳನ್ನ ಜನರಿಗೆ ತಲುಪಿಸಿದ್ದರು. ಕೃಷಿ ಇಲಾಖೆಯಿಂದ ಕೃಷಿ ಹೊಂಡಗಳು, ರೈತರ ಹೊಲಗಳಲ್ಲಿ ಚೆಕ್ ಡ್ಯಾಂಗಳು, ಬೀಜ, ಗೊಬ್ಬರಗಳ ಸಮಸ್ಯೆ ಆಗದಂತೆ ಇವ್ರು ನೋಡಿಕೊಂಡಿದ್ದರು. ಅಷ್ಟೇ ಅಲ್ಲ ರೈತರಿಗೆ ಅನುಕೂಲವಾಗಲಿ ಎಂದು ಜೆಸ್ಕಾಂ ಮೂಲಕ ವಿದ್ಯುತ್ ಕಂಬಗಳನ್ನ ಹಾಕಿಸಿದ್ದ ಬಸವನಗೌಡ ತುರುವಿಹಾಳ ಪ್ರಾರಂಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ಕೆಲ್ಸ ಮಾಡಿದ ಅನುಭವ ಕೂಡಾ ಇವ್ರಿಗಿದೆ. ತಂದೆಯ ಪ್ರಭಾವ ಇದ್ರೂ ಅದನ್ನು ಬಳಸಿಕೊಳ್ಳದೇ ವಯ್ಯಕ್ತಿಕವಾಗಿ ಜನ ಸೇವೆ ಕೈಗೊಂಡು ರಾಜಕೀಯವಾಗಿ ಬೆಳೆದು ಬಂದ ಇವ್ರು ತುರುವಿಹಾಳ ಗ್ರಾಮ ಪಂಚಾಯತ್ ಸದಸ್ಯರಾಗಿ ಉತ್ತಮ ಸೇವೆ ಸಲ್ಲಿಸಿ, ಅತ್ಯುತ್ತಮ ಗ್ರಾಮ ಪಂಚಾಯತ್ ಸದಸ್ಯ ಎಂದು ಕರೆಯಿಸಿಕೊಂಡಿದ್ರು. ಈ ಬಾರಿ ಇವ್ರು ಕಣಕ್ಕಿಳಿದ್ರೆ ಶಾಸಕ ಪ್ರತಾಪ್ ಗೌಡ ಪಾಟೀಲರನ್ನು ಸೋಲಿಸೋದು ಗ್ಯಾರಂಟಿ ಅಂತಿದ್ದಾರೆ ಇಲ್ಲಿನ ಮತದಾರರು

ತೆನೆ ಹೊರೋದ್ಯಾರು?

ಮಸ್ಕಿ ವಿಧಾನ ಸಭಾ ಕ್ಷೇತ್ರದಲ್ಲಿ ಜಾತ್ಯತೀತ ಜನತಾದಳ  ಆಟಕ್ಕೂಂಟು ಲೆಕ್ಕಕಿಲ್ಲ ಎನ್ನುವಂತಿದೆ. ಜೆಡಿಎಸ್ ಪಕ್ಷದಿಂದ ರಾಜಾ ಸೋಮನಾಥ ನಾಯಕ ಸ್ಪರ್ದೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿವೆ ಆದರೂ ಕೊನೆಗಳಿಗೆ ಅವರು ಸ್ಪರ್ದೆಯಿಂದ ಹಿಂದೆ ಸರಿಯುವ ಎಲ್ಲಾ ಲಕ್ಷಣಗಳು ಇವೆ.

ಕಳೆದ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲರ  ಗೆಲುವಿಗೆ ಬಿಜೆಪಿಯಿಂದ ಕಣಕ್ಕಿಳಿದಿದ್ದ ಮಹದೇವಪ್ಪ ಗೌಡರೆ ಕಾರಣ ಎಂದು ಹೇಳಲಾಗುತ್ತಿದೆ. ಇವರಿಬ್ಬರು ಸಂಬಂಧಿಕರು ಅಂದ್ರೆ ಮಾವ ಅಳಿಯ ಅಂತೆ. ಇಬ್ಬರೂ ಕೂಡಾ ಒಪ್ಪಂದ ಮಾಡಿಕೊಂಡ ಕಳೆದ ಬಾರಿ ಪ್ರತಾಪಗೌಡ ಗೆದ್ದರು ಅನ್ನೋ ಮಾತು ಇಲ್ಲಿನ ರಾಜಕೀಯ ವಲಯದಿಂದ ಕೇಳಿ ಬರ್ತಿದೆ. ಹಾಗಾಗಿ ಈ ಬಾರಿ ಮಹದೇವಪ್ಪ ಗೌಡ ಮತ್ತೆ ಬಿಜೆಪಿಯಿಂದ ಟಿಕೇಟ್ ಕೇಳಿದ್ರೂ ಕೂಡಾ ಗೌಡರ ಕಮಿಟಮೆಂಟ್ ರಾಜಕಾರಣ ಗೊತ್ತಾಗಿರೋದ್ರಿಂದ ಟಿಕೇಟ್ ಕೊಡೋದಕ್ಕೆ ಬಿಜೆಪಿ ನಾಯಕರು ಮನಸ್ಸು ಮಾಡ್ತಿಲ್ಲ. ಇನ್ನು ಇವ್ರು ಕಣಕ್ಕಿಳಿಯದೇ ಇರೋದ್ರಿಂದ ಇದು ಪ್ರತಾಪ್ ಗೌಡ ಪಾಟೀಲರಿಗೂ ಈ ಬಾರಿ ಹಿನ್ನಡೆಯನ್ನುಂಟು ಮಾಡೋದ್ರಲ್ಲಿ ಅನುಮಾನ ಇಲ್ಲ. ಹಾಗಾಗಿ ಬಿಜೆಪಿಯ ಬಸವನಗೌಡ ತುರವಿಹಾಳ ಅವ್ರಿಗೆ ಇದೂ ಲಾಭ ತರೋದ್ರಲ್ಲಿ ಡೌಟ್ ಇಲ್ಲ.

ಒಟ್ನಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಡೈರೆಕ್ಟ್ ಫೈಟ್ ಏರ್ಪಟ್ಟಿರೋದಂತೂ ನಿಜ. ಪ್ರತಾಪಗೌಡ ಪಾಟೀಲ್ 2 ಬಾರಿ ಶಾಸಕರಾಗಿದ್ರೂ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೋಯ್ಯುವಲ್ಲಿ ವಿಫಲರಾಗಿರೋದ್ರಿಂದ ಅವರ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಬೀಳುವುದಂತ್ತು ಸತ್ಯ. ಇನ್ನು ಬಿಜೆಪಿಯಿಂದ ಈ ಬಾರಿ ಕಣಕ್ಕಿಳಿತಿರೋ ಆರ್  ಬಸವನಗೌಡ ತುರುವಿಹಾಳ ಕ್ಷೇತ್ರದಲ್ಲಿ ಓಡಾಡ್ತಾ ಜನರನ್ನು ಸಂಘಟಿಸ್ತಾ ಅಭಿವೃದ್ಧಿಗೆ ಪೂರಕವಾಗಿ ನಡೆದುಕೊಳ್ತಿರೋದು ನೋಡಿದ್ರೆ ಈ ಬಾರಿ ಬಿಜೆಪಿ ಮತ್ತೆ ಕ್ಷೇತ್ರವನ್ನು ತೆಕ್ಕೆಗೆ ಹಾಕಿಕೊಳ್ಳೋ ಹಾಗೇ ಕಾಣ್ತಿದೆ.