ಚುನಾವಣಾ ಕುರುಕ್ಷೇತ್ರ 2018 ಶಿಕಾರಿಪುರ (ಶಿವಮೊಗ್ಗ ಜಿಲ್ಲೆ)

ಶಿಕಾರಿಪುರ ವಿಧಾನಸಭಾ ಕ್ಷೇತ್ರ

ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬಗ್ಗೆ. 2013 ರ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಕಟ್ಟಿ ಯಡಿಯೂರಪ್ಪ ಗೆದ್ದಿದ್ರು. 2014ರಲ್ಲಿ ಉಪಚುನಾವಣೆ ನಡೆದಾಗ ಬಿಎಸ್ವೈ ಪುತ್ರ ರಾಘವೇಂದ್ರ ಗೆದ್ದು ಶಾಸಕರಾಗಿದ್ದಾರೆ. ಹಾಗಿದ್ರೆ ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷರ ಕ್ಷೇತ್ರದಲ್ಲಿ ಅದ್ರಲ್ಲು ಭಾವಿ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಹೇಗಿದೆ ಪರಿಸ್ಥಿತಿ ಮತ್ತೆ ರಾಜ್ಯದ ಗದ್ದುಗೆಗೆ ಏರಿಸ್ತಾರಾ ಇಲ್ಲಿನ ಮತದಾರರು..ಈ ಬಗೆಗಿಗನ ಗ್ರೌಂಡ್ ರಿಪೋರ್ಟ್..

 

ಶಿಕಾರಿಪುರ ವಿಧಾನಸಭಾ ಕ್ಷೇತ್ರ.ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಶಿವಶರಣರ ನಾಡು ಅಂತಲೇ ಪ್ರಸಿದ್ಧಿ.. ಕನ್ನಡದ ಪ್ರಥಮ ಸಾಮ್ರಾಜ್ಯವಾದ ಕದಂಬ ವಂಶದ ಸ್ಥಾಪಕ ಮಯೂರ ವರ್ಮನ ಹುಟ್ಟೂರು ತಾಳಗುಂದ ಇದೇ ತಾಲೂಕಿನಲ್ಲಿ ಇದೆ. ಸ್ವಾತಂತ್ರ್ಯ ಹೋರಾಟದ ಸ್ಥಳ ಈಸೂರು ಇರೋದು ಶಿಕಾರಿಪುರ ತಾಲೂಕಿನಲ್ಲಿಯೇ..ಇನ್ನು ರಾಜಕೀಯವಾಗಿ ಶಿಕಾರಿಪುರ ಅಂದ್ರೆ ನೆನಪಾಗೋದೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಚಾಣಾಕ್ಷ ರಾಜಕಾರಣಿ. ಎಂಥದ್ದೇ ರಾಜಕೀಯ ಪರಿಸ್ಥಿತಿಯನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ಹಿರಿಯ ರಾಜಕೀಯ ಮುತ್ಸದ್ಧಿ.. ರಾಜ್ಯ ಮತ್ತು ದೇಶದಲ್ಲಿ ಹೆಸರು ಮಾಡಿರುವ ಯಡಿಯೂರಪ್ಪ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ರೆಡಿಯಾಗಿದ್ದಾರೆ. ಇನ್ನು ಶಿಕಾರಿಪುರ ವಿಧಾನಸಬಾ ಕ್ಷೇತ್ರದ ಬಗ್ಗೆ ಹೇಳಲೇ ಬೇಕು ಕ್ಷೇತ್ರ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿಯಾಗಿದೆ. ಇಲ್ಲಿರೋ ರಸ್ತೆಗಳು, ಸರಕಾರಿ ಕಟ್ಟಡಗಳು, ಸರಕಾರಿ ಆಸ್ಪತ್ರೆ ನೋಡಿದ್ರೇ ಯಾವುದೇ ಜಿಲ್ಲಾ ಕೇಂದ್ರಕ್ಕೂ ಕಮ್ಮಿಯಿಲ್ಲ. ಆ ರೀತಿಯಲ್ಲಿ ಕ್ಷೇತ್ರ ಅಭಿವೃದ್ಧಿಯಾಗಿದೆ. ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಇದಾರೆ.. ನಿಮಗೆ ಗೊತ್ತಿರಲೇ ಬೇಕು ಪುರಸಭೆಯಿಂದ , ವಿಧಾನಸಭೆ, ವಿರೋಧಪಕ್ಷದ ನಾಯಕನಾಗಿ ,ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ, ಬಿ.ಎಸ್.ಯಡಿಯೂರಪ್ಪ ತಮ್ಮದೇ ಆದ ಛಾಪು ಮೂಡಿಸಿರೋದು ಇದೇ ಕ್ಷೇತ್ರದಿಂದ ಅನ್ನೋದು ವಿಶೇಷ.. ಹೀಗೇ ಬಿಎಸ್ವೈ ಹಲವಾರು ಹುದ್ದೆಗಳನ್ನು ಅಲಂಕರಿಸಿ ಸೈ ಎನಿಸಿಕೊಂಡಿದ್ದಾರೆ. ಆದ್ರೆ 2013ರಲ್ಲಿ ಬದಲಾದ ರಾಜಕೀಯ ಸನ್ನಿವೇಶ್ದಲ್ಲಿ ಬಿಎಸ್ವೈ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿ ಚುನಾವಣೆಗೆ ಸ್ಪರ್ಧಿಸಿ ಗೆದ್ರು. ಆ ನಂತ್ರ ಮತ್ತೆ ಕೆಜೆಪಿ ಬಿಟ್ಟು ಬಿಜೆಪಿಗೆ ವಾಪಾಸಾಗಿ 2014ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ದಿಸಿ ಗೆದ್ರು. ಇನ್ನೊಂದಷ್ಟು ರಾಜಕೀಯ ವಿಚಾರಗಳನ್ನು ಹೇಳೋ ಮೊದಲು 2013ರ ಮತಬರಹ ನೋಡೋಣ

 

2013ರ ಮತಬರಹ

2013ರಲ್ಲಿ ಬಿಎಸ್ ಯಡಿಯೂರಪ್ಪ ಕೆಜೆಪಿಯಿಂದ ನಿಂತು 69126 ಮತಗಳನ್ನು ಪಡೆದು ಗೆದ್ರೆ ಕಾಂಗ್ರೆಸ್ ನ ಶಾಂತವೀರಪ್ಪ ಗೌಡ 44701 ಮತಗಳನ್ನು ಪಡೆದ್ರು.

ಇಷ್ಟೆಲ್ಲಾ ಬದಲಾವಣೆಗಳಾದ ಮೇಲೆ 2014ರಲ್ಲಿ ಮತ್ತೆ ಬಿಎಸ್ವೈ ಕೆಜೆಪಿಯನ್ನುಬಿಟ್ಟು ಬಿಜೆಪಿಗೆ ಬಂದು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲ್ತಾರೆ. ಆಗ ಶಿಕಾರಿಪುರ ಕ್ಷೇತ್ರಕ್ಕೆ ಯಡಿಯೂರಪ್ಪನವರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯತ್ತೆ. ಹಾಗಿದ್ರೆ 2014ರ ಮತಬರಹವನ್ನೋಮ್ಮೆ ನೋಡೋಣ

 

2014ರ ಉಪಚುನಾವಣೆ ರಿಸಲ್ಟ್

ಇದು 2014ರ ಉಪಚುನಾವಣೆಯ ರಿಸಲ್ಟ್. ಯಡಿಯೂರಪ್ಪನವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ರಿಂದ ತೆರವಾದ ಸ್ಥಾನಕ್ಕೆ ಅವ್ರ ಪುತ್ರ ಬಿವೈ ರಾಘವೇಂದ್ರ ಅವ್ರು ಸ್ಪರ್ಧಿಸಿ 71547 ಮತಗಳನ್ನು ಪಡೆಯೋದ್ರ ಮೂಲಕ ಗೆದ್ದು ಶಾಸಕರಾದ್ರು. ಇನ್ನು ಕಾಂಗ್ರೆಸ್ ನ ಶಾಂತವೀರಪ್ಪ ಗೌಡ 65117 ಮತಗಳನ್ನು ಪಡೆದು 6430 ಮತಗಳ ಅಂತರಿಂದ ಸೋತ್ರು.

ರಾಜ್ಯ ಬಿಜೆಪಿ 2013ರಲ್ಲಿ ಸೋತ ನಂತ್ರ ಸಾಕಷ್ಟು ಬದಲಾವಣೆಗಳು ಆದ್ವು. ಹಲವಾರು ಕಾರಣಗಳಿಂದ ಬಿಜೆಪಿ ರಾಜ್ಯದಲ್ಲಿ ಮಂಕಾಗತೊಡಗಿತ್ತು. ಆದ್ರೆ ಯಾವಾಗ ಬಿಎಸ್ ಯಡಿಯೂರಪ್ಪ ಮತ್ತೆ ಬಿಜೆಪಿ ರಾಜ್ಯಾಧ್ಷಕ್ಷರಾಗಿ ಚುಕ್ಕಾಣಿ ಹಿಡಿದ್ರೋ ಆಗ ಮತ್ತೆ ಬಿಜೆಪಿಗೆ ರಾಜ್ಯದಲ್ಲಿ ನವ ಚೈತನ್ಯ ಬರೋದಕ್ಕೆ ಪ್ರಾರಂಭವಾಯ್ತು. ಬಿಜೆಪಿ ಹವಾ ಮತ್ತೆ ರಾಜ್ಯದಲ್ಲಿ ಕಾಣಿಸೋದಕ್ಕೆ ಶುರುವಾಯ್ತು. ಇದು ಬಿಎಸ್ ಯಡಿಯೂರಪ್ಪನವರ ತಾಕತ್ತು. ರಾಜ್ಯದಲ್ಲಿ ಬಿಜೆಪಿಯನ್ನು ಈ ಲೆವೆಲ್ ಗೆ ತಂದಿರೋದು ಯಡಿಯೂರಪ್ಪ. ಅದು ಕೂಡಾ ಇದೇ ಶಿಕಾರಿ ಪುರದಿಂದಲೇ. ಕೇವಲ ಒಂದೆರಡು ಸ್ಥಾನಗಳನ್ನು ರಾಜ್ಯದಲ್ಲಿ ಬಿಜೆಪಿ ಪಡೆಯೋದಕ್ಕೆ ಪ್ರಾರಂಭವಾಗಿ ಬಿಜೆಪಿ ಸರ್ಕಾರ ರಚಿಸಿ. ಇದೀಗ ಮತ್ತೊಮ್ಮೆ ಅಧಿಕಾರವೇರೋ  ಹಂತದಲ್ಲಿದೆ ಅಂದ್ರೆ ಅದರ ಹಿಂದೆ ಬಿಎಸ್ವೈ ಪರಿಶ್ರಮ ಬೇಕಾದಷ್ಟಿದೆ.ಇನ್ನು ಬಿಜೆಪಿಯ ಭದ್ರ ಬುನಾದಿ ಪ್ರಾರಂಭವಾಗಿದ್ದು ಇದೇ ಶಿಕಾರಿಪುರದಿಂದ ಅನ್ನೋದ್ರಲ್ಲೂ ಡೌಟ್ ಇಲ್ಲ. ಅಂದ್ಹಾಗೇ ಶಿಕಾರಿಪುರ ಮೊದಲಿನಿಂದಲೂ ಬಿಜೆಪಿಯ ಭದ್ರಕೋಟೆ.. ಇದನ್ನ ಛಿದ್ರಗೊಳಿಸಲು ಯಾರು ಎಷ್ಟೇ ಪ್ರಯತ್ನ ಪಟ್ಟರೂ ಇದುವರೆಗೂ ಕೈಗೂಡಿಲ್ಲ..ಈ ಬಾರಿ ಬಿಎಸ್​ವೈ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವುದರಿಂದ ತಮ್ಮ ತಂದೆಗಾಗಿ ಕ್ಷೇತ್ರವನ್ನು ರಾಘವೇಂದ್ರ ಅವ್ರು ಬಿಟ್ಟು ಕೊಡ್ತಿದ್ದಾರೆ, ಹಾಗಿದ್ರೆ ಬನ್ನಿ ಈ ಬಾರಿ ಶಿಕಾರಿಪುರದಲ್ಲಿ ಯಾರ್ಯಾರು ಕಣದಲ್ಲಿರ್ತಾರೆ ಯಡಿಯೂರಪ್ಪನವರಿಗೆ ಟಾಂಗ್ ಕೊಡೋ ಕೆಪಾಸಿಟಿ ಯಾರಿಗಾದ್ರೂ ಇದ್ಯಾ ನೋಡೋಣ

ಬಿಜೆಪಿ ಅಭ್ಯರ್ಥಿ

ಯಸ್ ಮುಂದಿನ ಮುಖ್ಯಮಂತ್ರಿ ಅಂತಾನೇ ಬಿಂಬಿಸಲ್ಪಟ್ಟಿರೋ ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಶಿಕಾರಿಪುರದಿಂದಲೇ ಸ್ಪರ್ಧಿಸೋದು ಕನ್​ಫರ್ಮ್​.. ಪಕ್ಷವನ್ನೂ ಮೀರಿ ಅವ್ರು ಬೆಳೆದಿದ್ದಾರೆ.. ಪ್ರಶ್ನಾತೀತ ನಾಯಕರಾಗಿದ್ದಾರೆ.. ಕೆಜೆಪಿ ಕಟ್ಟಿ ಸ್ಪರ್ಧೆ ಎದುರಿಸಿದಾಗಲೂ ಕ್ಷೇತ್ರದ ಮತದಾರರು ಅವರನ್ನು ಕೈಬಿಟ್ಟಿರಲಿಲ್ಲ ಅಂದ್ರೆ ಅದು ಅವ್ರ ವಯ್ಯಕ್ತಿಕ ವರ್ಚಸ್ಸಿಗೆ ಹಿಡಿದ ಕೈ ಗನ್ನಡಿ. ಇ,ಟೆಲ್ಲಾ ಆದ್ರೂ ಕೂಡಾ ಮತ್ತೆ ಬಿಜೆಪಿಗೆ ಬಂದು ಲೋಕಸಬಾ ಚುನಾವಣೆಗೆ ನಿಂತಾಗ ಇಲ್ಲಿನ ಜನ ಮತ್ತೆ ಇವ್ರ ಕೈ ಹಿಡಿದ್ರು. ಹಾಗಾಗಿ ಸಂಸದರಾಗಿ ಆಯ್ಕೆಯಾಗಿ ರಾಷ್ಟ್ರ ರಾಜಕಾರಣಕ್ಕೂ ಎಂಟ್ರಿ ಕೊಟ್ಟರು. ಆದ್ರೆ ಯಾವಾಗ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅವರನ್ನು ಆಯ್ಕೆ ಮಾಡಲಾಯ್ತೋ ಮತ್ತೆ ರಾಜ್ಯ ಚುನಾವಣಾ ಅಕಾಡಕ್ಕೆ ಧುಮುಕಿರುವ ಯಡಿಯೂರಪ್ಪ ತಮ್ಮ ಪ್ರಭಾವ ಬೀರಲು ಪ್ರಾರಂಭಿಸಿದ್ರು. ಇದೀಗ ಮತ್ತೆ ಚುನಾವಣೆ ಬಂದಿದೆ. ಮತ್ತೆ ಶಿಕಾರಿಪುರದಿಂದ ಸ್ಪರ್ಧಿಸೋದಕ್ಕೆ ಬಿಎಸ್ವೈ ರೆಡಿಯಾಗಿದ್ದಾರೆ. ಈ ಸಂದರ್ಭದಲ್ಲಿ ಇವ್ರ ರಾಜಕೀಯ ಇತಿಹಾಸವನ್ನೊಮ್ಮೆ ನೋಡಲೇ ಬೇಕು. ಹೌದು, 1983ರಿಂದ ಇಲ್ಲಿಯ ವರೆಗೆ 7 ಬಾರಿ ಶಾಸಕರಾಗಿ ಬಿ.ಎಸ್.ಯಡಿಯೂರಪ್ಪ ಇಲ್ಲಿಂದ ಆಯ್ಕೆಯಾಗಿದ್ದಾರೆ. ಇಲ್ಲಿ ಗೆಲುವು ಸಾಧಿಸೋದು ನೀರು ಕುಡಿದಷ್ಟೇ ಸುಲಭ.. ತಾವು ಗೆದ್ದು, ರಾಜ್ಯದಲ್ಲಿ ಬಿಜೆಪಿ ಬಹುಮತ ಪಡೆದರೆ ಸಿಎಂ ಪಟ್ಟ ಎಂಬುದೇ ಇವರಿಗೆ ಪ್ಲಸ್ ಪಾಯಿಂಟ್. ಇಲ್ಲಿ ಪ್ರಬಲ ಪ್ರತಿಸ್ಪರ್ಧಿ ಇವ್ರಿಗೆ ಇಲ್ಲ ಅಂತಲೇ ಹೇಳಬಹುದು. ಯಾಕಂದ್ರೆ ಇದು ಬಿಜೆಪಿಯ ಬಲಿಷ್ಠ ಕೋಟೆ. ಬೇರೆ ಕ್ಷೇತ್ರದಿಂದ ಬಿಎಸ್​ವೈ ಸ್ಪರ್ಧಿಸುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಾಗ.. ರಾಜಕೀಯವಾಗಿ ನನಗೆ ಜನ್ಮ ನೀಡಿದವರು ಶಿಕಾರಿಪುರದವರು.. ನೀವು ನಾಮಪತ್ರ ಸಲ್ಲಿಸಿ ಹೋಗಿ.. ನಾವು ನೋಡಿಕೊಳ್ತೀವಿ ಅಂತ ಕ್ಷೇತ್ರದ ಜನರೇ ಅಭಯ ಹಸ್ತ ನೀಡಿದ್ದಾರೆ ಅಂತಾ ಅವ್ರು ಹೇಳಿರೋದು ನೋಡಿದ್ರೆ ಯಡಿಯೂರಪ್ಪನವರಿಗೆ ಇಲ್ಲಿ ಎದುರಾಳಿಗಳೇ ಇಲ್ಲ ಅಂತಾ ಗೊತ್ತಾಗತ್ತೆ. ಇನ್ನು  ಯಾರು ಏನೇ ತಂತ್ರ ಮಾಡಿದರೂ.. ಬೇರೆ ಪಕ್ಷದ ಜೊತೆ ಹೊಂದಾಣಿಕೆ ಮಾಡಿದರೂ ಯಡಿಯೂರಪ್ಪನವರ ಗೆಲುವು ಖಚಿತ ಅಂತಲೇ ಹೇಳಬಹುದು..

 

 

ಕೈ ಅಭ್ಯರ್ಥಿ

ಬಿಎಸ್ ಯಡಿಯೂರಪ್ಪನವರ ವಿರುದ್ಧ ಸ್ಪರ್ಧಿಸೋಕೆ ಕಾಂಗ್ರೆಸ್ ನಲ್ಲೂ ಯಾರೂ ಪ್ರತಿಸ್ಪರ್ಧಿಗಳಿಲ್ಲ ಆದ್ರೂ ಕೂಡಾ ಈ ಬಾರಿ ಎಂಎಲ್​ಸಿಯಾಗಿರುವ ಆರ್.ಪ್ರಸನ್ನಕುಮಾರ್ ಕಾಂಗ್ರೆಸ್​ನಿಂದ ಸ್ಪರ್ಧಿಸ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇತ್ತೀಚೆಗೆ ಶಿಕಾರಿಪುರ ಮತ್ತು ಬಿಎಸ್​ವೈ ಬಗ್ಗೆ ಆರೋಪಗಳ ಸುರಿಮಳೆ  ಮಾಡ್ತಿರೋದು ನೋಡಿದ್ರೆ ಬಹುತೇಕ ಶಿಕಾರಿಪುರದಿಂದ ಕಣಕ್ಕಿಳಿತಾರೆ ಅಂತಾನೇ ಹೇಳಲಾಗ್ತಿದೆ. ಆದ್ರೆ ಅಧಿಕೃತವಾಗಿ ಇಂತವರೇ ಅಭ್ಯರ್ಥಿ ಅಂತಾ ಇನ್ನೂ ಕಾಂಗ್ರೆಸ್  ಬಿಂಬಿಸಿಲ್ಲ..

ತೆನೆಹೊರೋದ್ಯಾರು?

ಬಿಎಸ್​ವೈ ವಿರುದ್ಧ ಯಾರನ್ನು ಸ್ಪರ್ಧೆಗೆ ಇಳಿಸಬೇಕು ಅನ್ನೋದು ಜೆಡಿಎಸ್​ಗೆ ತಲೆನೋವು ತರುವಂತಹ ವಿಷ್ಯ.. ಪ್ರತಿಬಾರಿ ಚುನಾವಣೆ ಬಂದಾಗಲೂ ಇದೇ ಪ್ರಶ್ನೆ ಉದ್ಭವಿಸುತ್ತದೆ. ಇನ್ನು ಜೆಡಿಎಸ್​ನಿಂದ ಹೆಚ್.ಬಳೆಗಾರ್​ ಅವರು ಮತ್ತೊಮ್ಮೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಇವರು ಕೆಎಎಸ್​ನಿಂದ ಸ್ವಯಂ ನಿವೃತ್ತಿ ಪಡೆದಿರುವ ಅಧಿಕಾರಿ. ಮೂರು ನಾಲ್ಕು ಬಾರಿ ಜೆಡಿಎಸ್​ನಿಂದಲೇ ಸ್ಪರ್ಧಿಸುತ್ತಾ ಬಂದಿದ್ದಾರೆ. ಆದರೆ, ವಿಜಯಲಕ್ಷ್ಮಿ ಮಾತ್ರ ದಕ್ಕಿಲ್ಲ. ಈ ಬಾರಿ ಕೂಡಾ ಗೆಲುವು ಇವ್ರಿಗೆ ಕಷ್ಟ ಇದೆ

ಇನ್ನು ಈಗಾಗಲೇ ರಾಜ್ಯದಲ್ಲಿಯೇ ಯಶಸ್ವಿಯಾಗಿ ಪರಿವರ್ತನಾ ಯಾತ್ರೆ ಮಾಡಿರುವ ಯಡಿಯೂರಪ್ಪ, ಶಿಕಾರಿಪುರ ಕ್ಷೇತ್ರದಲ್ಲೂ ಯಶಸ್ವಿ ಯಾತ್ರೆ ಮಾಡಿದ್ದಾರೆ. ಈ ಬಾರಿಯೂ  ಹುಚ್ಚುರಾಯಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ರಣಕೇಕೆ ಹಾಕಿದ್ದಾರೆ. ಅಪಾರ ಜನಸ್ತೋಮ ಸೇರಿಸುವ ಮೂಲಕ ಪ್ರತಿಪಕ್ಷದವರ ವಿರುದ್ಧ ಸಮರ ಕಹಳೆ ಮೊಳಗಿಸಿದ್ದಾರೆ. ಈ ಬಾರಿಯೂ ಇಲ್ಲಿ ಕಮಲ ಪಕ್ಷದ ಯಡಿಯೂರಪ್ಪರದ್ದೇ ಹವಾ.. ಜೊತೆಗೆ ಮೋದಿ ಅಲೆಯೂ ಕ್ಷೇತ್ರದಲ್ಲಿ ಇದೆ. ಕ್ಷೇತ್ರದಲ್ಲಿ ಆರು ಬಾರಿ ಬಿಜೆಪಿ, ನಾಲ್ಕು ಬಾರಿ ಕಾಂಗ್ರೆಸ್, ತಲಾ ಒಂದು ಬಾರಿ ಪ್ರಜಾ ಸೋಷಿಯಲಿಸ್ಟ್ ಪಕ್ಷ ಹಾಗೂ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.ಆದ್ರೆ  ಯಡಿಯೂರಪ್ಪ ಅವರು ಇದೇ ಕ್ಷಏತ್ರದಿಂದ ಏಳು ಬಾರಿ ಗೆದ್ದಿದ್ದರೆ ಅಂದ್ರೆ ಅದು ಅವ್ರ ತಾಕತ್ತನ್ನು ತೋರಿಸತ್ತೆ.

 

 

ಒಟ್ಟು 1ಲಕ್ಷದ 89 ಸಾವಿರ ಲಕ್ಷ ಮತದಾರರಿರುವ ಶಿಕಾರಿಪುರ ಕ್ಷೇತ್ರದಲ್ಲಿ ದೊಡ್ಡ ಸಮುದಾಯ ಲಿಂಗಾಯತರದ್ದು. ಅವರೇ ನಿರ್ಣಾಯಕ.. ಅಲ್ಪಸಂಖ್ಯಾತರು 26 ಸಾವಿರ. 1 ಲಕ್ಷ ಹಿಂದುಳಿದ ವರ್ಗದ ಮತದಾರರಿದ್ದಾರೆ. ಈ ಬಾರಿ ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಖಾಡ ಪ್ರವೇಶ ಮಾಡಿರುವುದರಿಂದ ಗೆಲುವಿನ ಅಂತರ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲಿದ್ದಾರೆ. 2013ರ ಚುನಾವಣೆಯಲ್ಲಿ 24 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅಂದ್ಹಾಗೆ ತಾಲೂಕು ಬಿಜೆಪಿಯ ಮುಖ್ಯ ಶಕ್ತಿ ಇರುವುದು ಅದರ ಕಾರ್ಯಕರ್ತರ ಪಡೆಯಲ್ಲಿ. ಇಷ್ಟು ವರ್ಷ ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನೇ ಈ ಬಾರಿ ಬಿಜೆಪಿ ಮುಂದಿಟ್ಟಿದೆ. ಅಭಿವೃದ್ಧಿ ಮಂತ್ರ, ಮೋದಿ ಜಪ.. ಮತ್ತೊಮ್ಮೆ ಬಿಜೆಪಿಯವರ ಅಸ್ತ್ರಗಳು. ತಾಲೂಕಿನ ಇಡೀ ಬಿಜೆಪಿ ಘಟಕ ಯಡಿಯೂರಪ್ಪ ಅವರ ಹಿಂದಿದೆ. ಈ ಬಾರಿ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು ಎಂಬ ಒತ್ತಾಯ ಕ್ಷೇತ್ರದಲ್ಲಿ ಎದ್ದಿದೆ. ಈ ಕ್ಷೇತ್ರ ಗೆದ್ದರೆ ಶಿವಮೊಗ್ಗ ನಗರ ಕ್ಷೇತ್ರವೂ ಬಿಜೆಪಿ ಬುಟ್ಟಿಗೆ ಬೀಳಲಿದೆ ಅನ್ನೋದು ರಾಜಕೀಯ ಲೆಕ್ಕಾಚಾರ.. ಯಾಕಂದ್ರೆ ಅಲ್ಲಿಯೂ ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮೇಲೂ ಫಲಿತಾಂಶ ಪರಿಣಾಮ ಬೀರಬಹುದು.. ಅದೇನೆ ಇದ್ರೂ ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ಇದೇ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಕ್ಕೆ ರೆಡಿಯಾಗಿದ್ದಾರೆ.

ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರಾಗಿರೋ ಬಿಎಸ್ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಅಂತಲೂ ಘೋಷಣೆ ಮಾಡಲಾಗಿದೆ. ಪರಿವರ್ತನಾ ಯಾತ್ರೆಯ ಮೂಲಕ ಬಿಎಸ್ವೈ ರಾಜ್ಯಾದ್ಯಂತ ಸಂಚಾರ ಕೂಡಾ ಮಾಡಿದ್ದಾರೆ. ಹಾಗಾಗಿ ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗೋದ್ರಲ್ಲಿ ಅನುಮಾನ ಇಲ್ಲ. ಮತ್ತೊಮ್ಮೆ ಮುಖ್ಯಮಂತ್ರಿಯನ್ನು ಕೊಡೋ ಖ್ಯಾತಿಗೆ ಶಿಕಾರಿಪುರ ಕ್ಷೇತ್ರ ಮುಂದಾಗೋದ್ರಿಂದ ಇಲ್ಲಿನ ಜನ ಅಭೂತಪೂರ್ವವಾಗಿ ಭಾರಿ ಅಂತರದಲ್ಲಿ ಈ ಬಾರಿ ಯಡಿಯೂರಪ್ಪನವರನ್ನು ಗೆಲ್ಲಿಸೋದ್ರಲ್ಲಿ ಅನುಮಾನ ಇಲ್ಲ.